ಜಿನೇವಾ: ಜಾಗತಿಕವಾಗಿ ಪತ್ರಕರ್ತರ ಹತ್ಯೆ ಪ್ರಮಾಣದಲ್ಲಿ ಬಾರೀ ಏರಿಕೆಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಈ ವರ್ಷ ಒಟ್ಟು 18 ದೇಶದಲ್ಲಿ 44 ಪತ್ರಕರ್ತರು ಹತ್ಯೆಯಾಗಿದ್ದಾರೆ. ಕಳೆದ ವರ್ಷಾವಧಿಗೆ ಹೋಲಿಸಿದರೆ 2018 ರ ಮೊದಲ ನಾಲ್ಕು ತಿಂಗಳಲ್ಲಿ 28 ರಷ್ಟು ಹೆಚ್ಚು ಪತ್ರಕರ್ತರ ಹತ್ಯೆಯಾಗಿದೆ ಎಂದು ಜಿನೀವಾ ಮೂಲದ ಪ್ರೆಸ್ ಎಂಬ್ಲಮ್ ಕ್ಯಾಂಪೇನ್ (ಪಿಇಸಿ) ವರದಿ ಮಾಡಿದೆ.
"ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ ದಿನ. ಆದರೆ ಸದ್ಯದ ಪರಿಸ್ಥಿತಿಅಲ್ಲಿ ಪತ್ರಕರ್ತರ ಹತ್ಯೆ ಪ್ರಮಾಣ ಹೆಚ್ಚಳವಾಗಿರುವುದನ್ನು ಕಂಡರೆ ಆತಂಕವಾಗುತ್ತದೆ." ಪಿಇಸಿ ಹೇಳಿದೆ.ಜನವರಿಯಿಂದ ಏಪ್ರಿಲ್ ವರೆವಿಗೆ ಹತ್ಯೆಗೀಡಾದ ಪತ್ರಕರ್ತರ ಸಂಖ್ಯೆಯಲ್ಲಿ ಕಳೆದ ಸಾಲಿಗಿಂತ ಶೇ.57ರಷ್ಟು ಏರಿಕೆಯಾಗಿದೆ.
"ಏಪ್ರಿಲ್ 30 ರಂದು ಅಫ್ಘಾನಿಸ್ಥಾನ ಕಾಬೂಲ್ ಬಾಂಬ್ ಸ್ಪೋಟದಲ್ಲಿ ಒಂಭತ್ತು ಪತ್ರಕರ್ತರ ಸಾವು ನಿಜಕ್ಕೂ ಅಚ್ಚರಿ ತಂದಿದೆ." ಪಿಇಸಿ ನ ಅಧಿಕಾರಿಗಳು ಹೇಳಿದ್ದಾರೆ."ಪತ್ರಕರ್ತರನ್ನೇ ಗುರಿಯಾಗಿಸಿಕೊಂಡು ನಡೆಸುವ ಭಯೋತ್ಪಾದಕ ದಾಳಿಯನ್ನು ಪಿಇಸಿ ಖಂಡಿಸುತ್ತದೆ" ಅವರು ಹೇಳಿದರು.
ವರ್ಷಾರಂಭದಿಂದ ಇಲ್ಲಿಯವರೆಗೆ ಅಫ್ಘಾನಿಸ್ಥಾನದಲ್ಲಿ ಒಟ್ಟು 11 ಪತ್ರಕರ್ತರ ಹತ್ಯೆಯಾಗಿದೆ. ಇನ್ನು ಮೆಕ್ಸಿಕೋ, ಸಿರಿಯಾಗಳಲ್ಲಿ ತಲಾ 4, ಈಕ್ವೆಡಾರ್ ಹಾಗೂ ಯೆಮನ್ ನಲ್ಲಿ ತಲಾ 3, ಬ್ರಿಜಿಲ್, ಗಾಝಾ, ಗ್ವಾಟೆಮಾಲಾ ಹಾಗೂ ಪಾಕಿಸ್ತಾನದಲ್ಲಿ ತಲಾ ಇಬ್ಬರು ಪತ್ರಕರ್ತರ ಕೊಲೆಯಾಗಿದೆ.
ಈ ಎಲ್ಲಾ ಘಟನೆಗಳನ್ನು ಗಮನಿಸಿರುವ ಪಿಇಸಿ ಕಾರ್ಯದರ್ಶಿ ಬ್ರೈಸ್ ಲೆಂಪೆನ್ ಅವರು ಪತ್ರಕರ್ತರ ರಕ್ಷಣೆಗಾಗಿ ರಾಷ್ಟ್ರಗಳು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ. ಅದರಲ್ಲಿಯೂ ತನಿಖಾ ವರದಿಗಾರರಿಗೆ ಹೆಚ್ಚುವರಿ ರಕ್ಷಣೆ ಒದಗಿಸಲು ಅವರು ಒತ್ತಾಯಿಸಿದರು.