ಇಸ್ಲಾಮಾಬಾದ್: ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಸಿರುಲ್ ಮುಲ್ಕ್ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೋಮವಾರ ನೇಮಕಗೊಂಡಿದ್ದಾರೆ.
ಪಾಕ್ ಪ್ರಧಾನಿ ಶಹೀದ್ ಖಾಕನ್ ಅಬ್ಬಾಸಿ, ಪ್ರತಿಪಕ್ಷ ನಾಯಕ ಖುರ್ಷಿದ್ ಶಾ ಹಾಗೂ ಸ್ಪೀಕರ್ ಸರ್ದಾರ್ ಅಯಾಜ್ ಸಿದ್ಧಿಖ್ ಅವರು ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಹಂಗಾಮಿ ಪ್ರಧಾನಿಯನ್ನು ಘೋಷಿಸಿದ್ದಾರೆ.
ನಾವು ನಾಸಿರುಲ್ ಮುಲ್ಕ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ಆಯ್ಕೆ ಮಾಡಿದ್ದು, ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಅಬ್ಬಾಸಿ ತಿಳಿಸಿದ್ದಾರೆ.
ಹಂಗಾಮಿ ಪ್ರಧಾನಿ ಆಯ್ಕೆ ಸಂಬಂಧ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಹಾಗೂ ಪ್ರತಿಪಕ್ಷದ ನಾಯಕ ಖುರ್ಷಿದ್ ಶಾ ಅವರು ಆರು ಬಾರಿ ಸಭೆ ನಡೆಸಿದರೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಅಂತಿಮವಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಮಾಡಲಾಗಿದೆ.
ಪಾಕಿಸ್ತಾನದಲ್ಲಿ ಜುಲೈ 25ರಂದು ನ್ಯಾಷನಲ್ ಅಸೆಂಬ್ಲಿ ಮತ್ತು ನಾಲ್ಕು ಪ್ರಾಂತ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಹೊಸ ಸರ್ಕಾರ ರಚನೆ ಆಗುವ ತನಕ ದೈನಂದಿನ ಆಡಳಿತದ ನಿರ್ವಹಣೆಗಾಗಿ ನಾಸಿರುಲ್ ಮುಲ್ಕ್ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಶಾಹಿದ್ ಖಾನ್ ಅಬ್ಬಾಸಿ ನೇತೃತ್ವದ ಸರ್ಕಾರದ ಅವಧಿ ಮೇ 31ಕ್ಕೆ ಮುಗಿಯಲಿದೆ. 2013ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಿಎಂಎಲ್-ಎನ್ ಅಧಿಕಾರಕ್ಕೆ ಬಂದಿತ್ತು.