
ಜಕಾರ್ತ : ಭೂಕಂಪನ ಹಾಗೂ ಸುನಾಮಿ ಅಪ್ಪಳಿಸಿರುವ ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಮೃತಪಟ್ಟವರ ಸಂಖ್ಯೆ 1 ಸಾವಿರದ 234ಕ್ಕೆ ಏರಿಕೆ ಆಗಿದೆ.
ಸುನಾಮಿಯಿಂದ ಉಂಟಾಗಿರುವ ಹಾನಿ ಸಂಬಂಧ ಇಂಡೋನೇಷ್ಯಾ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ಹೊಸದಾದ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಎರಡು ದಿನಗಳ ಹಿಂದಷ್ಟೇ ಸುನಾಮಿಯಿಂದ 832 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.
500 ಮಂದಿ ಗಾಯಗೊಂಡಿದ್ದು, 16. 372 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಏಜೆನ್ಸಿ ತಿಳಿಸಿದೆ.
ಇಂಡೋನೇಷ್ಯಾದ ದ್ವೀಪ ಪ್ರದೇಶವಾಗಿರುವ ಸುಲಾವಾಸಿಯಲ್ಲಿ ಎರಡು ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7 ಹಾಗೂ 6.1 ರಷ್ಚು ದಾಖಲಾಗಿದೆ. ಶುಕ್ರವಾರ ಸುನಾಮಿಯಿಂದಾಗಿ ಅಪಾರ ಪ್ರಮಾಣದ ಜೀವ ಹಾಗೂ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.
ಸಾಧ್ಯವಾದಷ್ಟು ಎಲ್ಲ ರೀತಿಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರಿಗೆ ಭರವಸೆ ನೀಡಿದ್ದಾರೆ. ಈ ಮಧ್ಯೆ ಭಾರತೀಯ ನೌಕ ಮತ್ತು ವಾಯುಪಡೆಯಿಂದ ಮೂರು ಹಡಗುಗಳು ಮತ್ತು ಎರಡು ವಿಮಾನಗಳಲ್ಲಿ ಪರಿಹಾರ ಸಲಕರಣೆಗಳನ್ನು ರವಾನಿಸಲಾಗಿದೆ.
Advertisement