ಲಂಡನ್: ಲೇಖಕಿ ಅನಾ ಬರ್ನ್ಸ್ ಅವರಿಗೆ 2018ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ.
ಉತ್ತರ ಐರ್ಲೆಂಡ್ ನವರಾದ ಅನಾ ಅಲ್ಲಿನ ಕ್ಯಾಥೋಲಿಕ್-ಪ್ರೊಟೆಸ್ಟಂಟ್ ಸಮುದಾಯದ ನಡುವೆ ಸಂಭವಿಸಿದ ಹಿಂಸಾಚಾರ ಕುರಿತ ಘಟನೆಯಾಧರಿಸಿ ರಚಿಸಿದ "ಮಿಲ್ಕ್ ಮ್ಯಾನ್" ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.
50,000 ಪೌಂಡ್ (66,000 ಅಮೆರಿಕನ್ ಡಾಲರ್) ಮೊತ್ತದ ಬಹುಮಾನ ಪಡೆದ ಉತ್ತರ ಐರ್ಲೆಂಡ್ ನ ಮೊದಲ ಮಹಿಳೆ ಅನಾ ಬರ್ನ್ಸವರಾಗಿದ್ದಾರೆ.
ಐವತ್ತು ವರ್ಷಗಳ ಹಿಂದೆ ಬೂಕರ್ ಪ್ರಶಸ್ತಿ ಸ್ಥಾಪನೆಯಾಗಿದ್ದು ಅನಾ ಬರ್ನ್ಸ್ ಈ ಪ್ರಶಸ್ತಿ ಪಡೆದಿರುವ 17ನೇ ಮಹಿಳೆಯಾಗಿದ್ದಾರೆ.
"ಸಾಂಪ್ರದಾಯಿಕ ಆಲೋಚನೆಗೆ ಸವಾಲೊಡ್ಡುವ ಕಥೆ ಇದಾಗಿದ್ದು ವಿಶಿಷ್ಟವಾದ ಗದ್ಯಶೈಲಿ ಹೊಂದಿರುವ ಇಂತಹಾ ಕಾದಂಬರಿಯನ್ನು ಇದುವರೆಗೆ ನಾವ್ಯಾರೂ ಓದಿರಲಿಲ್ಲ" ಆಯ್ಕೆ ಸಮಿತಿ ಸದಸ್ಯರು ಹೇಳಿದ್ದಾರೆ.
"ಮಿಲ್ಕ್ ಮ್ಯಾನ್" ಒಂದು ಕುಟುಂಬದ ಸಂಬಂಧಗಳನ್ನು, ಸಾಮಾಜಿಕ ಒತ್ತಡ ಮತ್ತು ರಾಜಕೀಯ ದೌರ್ಜನ್ಯ, ಲೈಂಗಿಕ ದಬ್ಬಾಳಿಕೆಯ ಮತ್ತು ಕಿರುಕುಳದ ಹಿನ್ನೆಲೆಯೊಡನೆ ವಿವರಿಸುತ್ತದೆ.