ಕರ್ತಾರ್‌ಪುರ್ ಕಾರಿಡಾರ್ ಉದ್ಘಾಟನೆ: ಪಾಕ್ ಆಹ್ವಾನ ಸ್ವೀಕರಿಸಿದ ನವಜೋತ್ ಸಿಂಗ್ ಸಿಧು
ನವದೆಹಲಿ: ಮುಂದಿನ ತಿಂಗಳು 9 ರಂದು ಯಾತ್ರಾರ್ಥಿಗಳಿಗೆ ತೆರೆಯಲಾಗುವ ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ನೀಡಿರುವ ಆಹ್ವಾನವನ್ನು ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಸ್ವೀಕರಿಸಿದ್ದಾರೆ.
ತಮಗೆ ಪಾಕಿಸ್ತಾನ ಆಹ್ವಾನ ನೀಡಿರುವುದಕ್ಕೆ ಸಿಧು ಅವರು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಕೂಡ ಹೇಳಿದ್ದಾರೆ. ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ಸಿಧು ಅವರಿಗೆ ಪಾಕಿಸ್ತಾನ ಟೆಹ್ರಿಕ್ ಇ ಇನ್ಸಾಫ್ ಆಹ್ವಾನ ನೀಡಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ಪಾಕಿಸ್ತಾನದ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ದೇಗುಲವಾದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಭೇಟಿ ನೀಡುವ ಕರ್ತಾರ್‌ಪುರ ಕಾರಿಡಾರ್ ದ್ವಿಪಕ್ಷಿಯ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಕಳೆದ ವಾರ ಸಹಿ ಹಾಕಿದ್ದವು.
ಈ ಒಪ್ಪಂದದಂತೆ ಪ್ರತಿದಿನ 5,000 ಭಾರತೀಯ ಯಾತ್ರಾರ್ಥಿಗಳಿಗೆ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಅವಕಾಶ ನೀಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸೆನೆಟರ್ ಫೈಸಲ್ ಜಾವೇದ್ ಅವರು ಸಿಧು ಅವರನ್ನು ಸಂಪರ್ಕಿಸಿ ಉದ್ಘಾಟನಾ ಸಮಾರಂಭಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದೂ ವರದಿ ಹೇಳಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಸಿಧು ಪ್ರಧಾನಿ ಖಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕರ್ತಾರ್‌ಪುರ್ ದರ್ಬಾರ್ ಸಾಹಿಬ್‌ನೊಂದಿಗೆ ಭಾರತದ ಪಂಜಾಬ್‌ನ ಡೇರಾ ಬಾಬಾ ನಾನಕ್ ದೇವಾಲಯವನ್ನು ಈ ಕಾರಿಡಾರ್ ಸಂಪರ್ಕಿಸುತ್ತದೆ.ಆಗಸ್ಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಹಿಂತೆಗೆದುಕೊಂಡ ನಂತರ ಪಾಕ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ