
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಒಂದೇ ದಿನ 465 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 7,481ಕ್ಕೆ ಏರಿಕೆಯಾಗಿದೆ.
ಅಲ್ಲಿನ ಸರ್ಕಾರ ಕೊರೋನಾ ತಡೆಗೆ ಹೆಣಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಆದೇಶಗಳನ್ನು ಪಾಲಿಸದ ಮೌಲ್ವಿಗಳು ತಲೆನೋವಾಗಿ ಪರಿಣಮಿಸಿದ್ದಾರೆ.
ಮಸೀದಿಗಳಲ್ಲಿ ಧಾರ್ಮಿಕ ಸಭೆಗಳನ್ನು ನಡೆಸದಂತೆ ನಿರಂತರ ಮನವಿಯ ಹೊರತಾಗಿಯೂ ಪಾಕ್ ನ ಮೌಲ್ವಿಗಳು ಅದಕ್ಕೆ ಪಾಲಿಸುವುದಿರಲಿ, ಪರಿಗಣಿಸುತ್ತಲೂ ಇಲ್ಲ.
ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆಗಳ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಏ.17 ರಂದು ಒಂದೇ ದಿನ ಕೊರೋನಾ ಸೋಂಕಿಗೆ 143 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ 3,391 ರೋಗಿಗಳಿದ್ದರೆ, ಸಿಂಧ್ ನಲ್ಲಿ 2,217 ಕೈಬರ್-ಪಖ್ತುಂಕ್ವಾ ದಲ್ಲಿ 1,077 ರೋಗಿಗಳು, ಬಲೂಚಿಸ್ಥಾನದಲ್ಲಿ 335, ಗಿಲ್ಗಿಟ್ ಬಾಲ್ಟಿಸ್ಥಾನದಲ್ಲಿ 250, ಇಸ್ಲಾಮಾಬಾದ್ 163
ಪ್ರಕರಣಗಳು ವರದಿಯಾಗಿವೆ.
ಈ ವರೆಗೂ 92,548 ಪರೀಕ್ಷೆಗಳನ್ನು ಮಾಡಲಾಗಿದೆ. ಪಾಕಿಸ್ತಾನದ ಅಧ್ಯಕ್ಷರು ಜಮಾತ್-ಎ-ಇಸ್ಲಾಮಿ ಸಂಘಟನೆಯ ಮುಖ್ಯಸ್ಥ ಸಿರಾಜುಲ್ ಹಕ್, ಜಮೈತ್-ಉಲೇಮಾ-ಎ-ಇಸ್ಲಾಮ್ ನ ಮುಖ್ಯಸ್ಥ ಮೌಲಾನ ಫಜ್ಲೂರ್ ರೆಹ್ಮಾನ್ ಸೇರಿದಂತೆ ಹಲವು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಸರ್ಕಾರದ ಆದೇಶಗಳನ್ನು ಪಾಲಿಸಿ, ಸಭೆಗಳನ್ನು ನಡೆಸದಂತೆ ಮನವಿ ಮಾಡಿದ್ದಾರೆ. ಆದರೆ ಧಾರ್ಮಿಕ ನಾಯಕರು ಪಾಕಿಸ್ತಾನದ ಸರ್ಕಾರದೊಂದಿಗೆ ನಿರೀಕ್ಷಿತ ರೀತಿಯಲ್ಲಿ ಸಹಕರಿಸದೇ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
Advertisement