ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆ ಈಗ ಹುಟ್ಟಿನ ವಿವಾದ ಎದುರು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹುಟ್ಟಿನ ಮೂಲದ ಬಗ್ಗೆ ವಿವಾದವೆದ್ದಿದೆ. ಅವರು ಶ್ವೇತಭವನದಲ್ಲಿ ರಾಜಕೀಯದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಅರ್ಹತೆ ಹೊಂದಿಲ್ಲ ಎಂಬ ಮಾತುಗಳನ್ನು ಕೇಳಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್
Updated on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹುಟ್ಟಿನ ಮೂಲದ ಬಗ್ಗೆ ವಿವಾದವೆದ್ದಿದೆ. ಅವರು ಶ್ವೇತಭವನದಲ್ಲಿ ರಾಜಕೀಯದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಅರ್ಹತೆ ಹೊಂದಿಲ್ಲ ಎಂಬ ಮಾತುಗಳನ್ನು ಕೇಳಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಈ ಹಿಂದೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಧ್ಯಕ್ಷೀಯ ಚುನಾವಣೆಗೆ ನಿಂತಿದ್ದ ವೇಳೆ ಕೂಡ ಅವರ ಹುಟ್ಟಿನ ಬಗ್ಗೆ ಇದೇ ರೀತಿ ವಿವಾದವೆದ್ದಿತ್ತು. ವಿರೋಧ ಪಕ್ಷದ ನಾಯಕರು ಅವರ ಮೂಲ, ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿದ್ದರು. 
55 ವರ್ಷದ ಕಮಲಾ ಹ್ಯಾರಿಸ್ ಜಮೈಕಾ ಮೂಲದ ತಂದೆ ಮತ್ತು ಭಾರತೀಯ ಮೂಲದ ತಾಯಿಗೆ ಜನಿಸಿ ಕ್ಯಾನಿಫೋರ್ನಿಯಾ ಸೆನೆಟರ್ ಆಗಿದ್ದಾರೆ. 

2010ರಲ್ಲಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಹುದ್ದೆಗೆ ಸ್ಪರ್ಧಿಸಿ ಕಮಲಾ ಹ್ಯಾರಿಸ್ ಮುಂದೆ ಸೋತಿದ್ದ ಡಾ ಜಾನ್ ಈಸ್ಟ್ ಮನ್ ಅವರು ಕಮಲಾ ಹ್ಯಾರಿಸ್ ರವರ ಹುಟ್ಟಿನ ಮೂಲದ ಬಗ್ಗೆ ಕೆದಕಿದ್ದಾರೆ. ಶ್ವೇತಭವನದಲ್ಲಿ ಉಪಾಧ್ಯಕ್ಷೆ ಹುದ್ದೆ ಅಲಂಕರಿಸಲು ಕಮಲಾ ಹ್ಯಾರಿಸ್ ಅವರು ಅರ್ಹರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗಿದೆ. 

ಇದಕ್ಕೆ ಡೆಮಾಕ್ರಟಿಕ್ ಪಕ್ಷದ ಜೊ ಬಿಡನ್ ತಂಡ ವರ್ಣಬೇಧ ನೀತಿಯನ್ನು ಇದು ಸಾರುತ್ತದೆ ಎಂದು ಟೀಕಿಸಿದೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್ ರವರು ಉಪಾಧ್ಯಕ್ಷೆ ಹುದ್ದೆಗೆ ಸ್ಪರ್ಧಿಸಲು ಅರ್ಹತೆ ಹೊಂದಿಲ್ಲ ಎಂಬುದನ್ನು ಖ್ಯಾತ, ಅತ್ಯಂತ ಪ್ರತಿಭಾಶಾಲಿ ವಕೀಲರಾದ ಡಾ ಜಾನ್ ಈಸ್ಟ್ ಮನ್ ಹೇಳಿದ್ದಾರೆ. ಅದು ಸತ್ಯವಾ, ಸುಳ್ಳಾ ಎಂದು ನನಗೆ ಗೊತ್ತಿಲ್ಲ ಎಂದು ನಿನ್ನೆ ಶ್ವೇತಭವನದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕಮಲಾ ಹ್ಯಾರಿಸ್ ಜನಿಸಿದ್ದು ಕ್ಯಾಲಿಫೋರ್ನಿಯಾದ ಒಕ್ಲಾಂಡ್ ನಲ್ಲಿ 1964ರ ಅಕ್ಟೋಬರ್ 20ರಂದು. ಅವರ ತಾಯಿ ಶ್ಯಾಮಲಾ ಗೋಪಾಲನ್ ತಮಿಳು ನಾಡಿನವರು. ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದರು. ಇನ್ನು ಅವರ ತಂದೆ ಡೊನಾಲ್ಡ್ ಜೆ ಹ್ಯಾರಿಸ್ ಆಫ್ರಿಕಾದ ಜಮೈಕಾದವರು. 

ಮುಂಬರುವ ನವೆಂಬರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೊ ಬಿಡನ್ ಅವರು ಅಧ್ಯಕ್ಷರಾಗಿ ಗೆದ್ದು ಬಂದರೆ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗುತ್ತಾರೆ. 

ಅಮೆರಿಕ ಸಂವಿಧಾನದ ಪ್ರಕಾರ, ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವವರು ಅಮೆರಿಕದಲ್ಲಿ ಜನಿಸಿರಬೇಕು. ದೇಶದ ಎರಡನೇ ಅತಿದೊಡ್ಡ ರಾಜಕೀಯ ಹುದ್ದೆಯಾಗಿರುವ ಉಪಾಧ್ಯಕ್ಷ ಹುದ್ದೆಯನ್ನು ಕಮಲಾ ಹ್ಯಾರಿಸ್ ಅಲಂಕರಿಸಿದರೆ ಅವರು ಮೊದಲ ಕಪ್ಪು ವರ್ಣೀಯ, ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಆಫ್ರಿಕನ್-ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಆದರೆ ಡೆಮಾಕ್ರಟಿಕ್ ಪಕ್ಷ ಇದು ಅನಗತ್ಯ ವಿವಾದ ಎಂದು ಟೀಕಿಸಿದೆ. ಸಂವಿಧಾನದ ಪರಿಚ್ಛೇದ ಎರಡರ ಪ್ರಕಾರ 1787ರ ನಂತರ ಅಮೆರಿಕದಲ್ಲಿ ಜನಿಸಿದವರು ಇಲ್ಲಿನ ಸಹಜ ಪ್ರಜೆಯಾಗುತ್ತಾರೆ. ಕಮಲಾ ಹ್ಯಾರಿಸ್ 1964ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದವರು, ಹೀಗಾಗಿ ಅವರು ಸಹಜವಾಗಿ ಅಮೆರಿಕನ್ ಪ್ರಜೆಯಾಗಿದ್ದಾರೆ, ಇದರಲ್ಲಿ ಇನ್ನು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ನ್ಯಾಶನಲ್ ಫೈನಾನ್ಸ್ ಸಮಿತಿಯ ಅಜಯ್ ಭುಟೊರಿಯಾ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com