ಉಕ್ರೇನ್ ನ ವಿಮಾನ ಟೆಹ್ರಾನ್ ಬಳಿ ಪತನ: ಎಲ್ಲಾ 180 ಪ್ರಯಾಣಿಕರು ಸಾವು 

180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನ್ ನ ವಿಮಾನ ಬುಧವಾರ ಬೆಳಗ್ಗೆ ಟೆಹ್ರಾನ್ ವಿಮಾನ ನಿಲ್ದಾಣ ಹತ್ತಿರ ಅಪಘಾತಕ್ಕೀಡಾಗಿದೆ ಎಂದು ಇರಾನ್ ನ ಮಾಧ್ಯಮ ವರದಿ ಮಾಡಿದೆ. 
ಉಕ್ರೇನ್ ನ ವಿಮಾನ ಟೆಹ್ರಾನ್ ಬಳಿ ಪತನ: ಎಲ್ಲಾ 180 ಪ್ರಯಾಣಿಕರು ಸಾವು 

ಟೆಹ್ರಾನ್: ಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಉಕ್ರೇನ್ ನ ವಿಮಾನ ಬುಧವಾರ ಬೆಳಗ್ಗೆ ಟೆಹ್ರಾನ್ ವಿಮಾನ ನಿಲ್ದಾಣ ಸಮೀಪ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ.

ಟೆಹ್ರಾನ್ ನ ಇಮಾಮ್ ಖೊಮೈನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ತಾಂತ್ರಿಕ ತೊಂದರೆಯಿಂದ ಅಪಘಾತಕ್ಕೀಡಾಗಿರಬಹುದು ಎಂದು ಪ್ರಾಥಮಿಕ ವರದಿ ಹೇಳಿದೆ. ಟೆಹ್ರಾನ್ ನ ನೈರುತ್ಯ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ತನಿಖಾ ತಂಡ ಸದ್ಯ ಅಲ್ಲಿ ತನಿಖೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ವಕ್ತಾರ ರೆಜಾ ಜಾಫರ್ಜಾಡೆ ತಿಳಿಸಿದ್ದಾರೆ.

ಉಕ್ರೇನ್ ನ 737-800 ವಿಮಾನ ಇಂದು ಬೆಳಗ್ಗೆ ಉಕ್ರೇನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲಿ ಸಂದೇಶ ರವಾನಿಸುವುದನ್ನು ನಿಲ್ಲಿಸಿತು ಎಂದು ಫೈಟ್ ರಾಡಾರ್ 24 ವೆಬ್ ಸೈಟ್ ವರದಿ ಮಾಡಿದೆ. ಈ ಬಗ್ಗೆ ವಿಮಾನಯಾನ ಸಂಸ್ಥೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಇರಾನ್ ನ ಕ್ರಾಂತಿಕಾರಿ ನಾಯಕ ಜನರಲ್ ಖಾಸಿಮ್ ಸೊಲೈಮಾನಿಯ ಹತ್ಯೆಗೆ ಪ್ರತೀಕಾರವಾಗಿ ಇರಾಕ್ ನ ಅಮೆರಿಕಾ ಸೇನಾಪಡೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಸ್ವಲ್ಪ ಹೊತ್ತಿನಲ್ಲಿಯೇ ವಿಮಾನ ಅಪಘಾತಕ್ಕೀಡಾಗಿದೆ. ಇರಾನ್ ನ ತುರ್ತು ಸೇವಾ ಅಧಿಕಾರಿ ಪಿರ್ ಹುಸೈನ್ ಕುಲಿವಂದ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಮೃತಪಟ್ಟಿದ್ದಾರೆ.

ರಕ್ಷಣಾ ತಂಡ ಮೃತ ಶರೀರಗಳನ್ನು ಹೊರತೆಗೆಯಲು ನೋಡುತ್ತಿದೆ. 1990 ದಶಕದಲ್ಲಿ ಪ್ರಯಾಣಿಕರ ವಿಮಾನಕ್ಕೆ ಪರಿಚಯವಾದ 737-800 ವಿಮಾನ ಬೋಯಿಂಗ್ 737 ಮ್ಯಾಕ್ಸ್ ನ ಹಳೆ ಮಾದರಿಯಾಗಿದ್ದು ಇತ್ತೀಚಿನ ಸಮಯಗಳಲ್ಲಿ ಅನೇಕ ಭೀಕರ ಅಪಘಾತಕ್ಕೀಡಾಗುತ್ತಿದೆ.

ಮಾರ್ಚ್ 2016ರಲ್ಲಿ ಫ್ಲೈದುಬೈ 737-800 ದುಬೈಯಿಂದ ಹೊರಟಿದ್ದ ವಿಮಾನ ರಷ್ಯಾದ ರೊಸ್ಟೊವ್-ಆನ್-ಡೊನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿರುವಾಗ ಭೀಕರ ಅಪಘಾತಕ್ಕೀಡಾಗಿ 62 ಪ್ರಯಾಣಿಕರು ಮೃತಪಟ್ಟಿದ್ದರು. ಮತ್ತೊಂದು 737-800 ವಿಮಾನ ದುಬೈಯಿಂದ ಹೊರಟಿದ್ದ ವಿಮಾನ ಮೇ 2010ರಲ್ಲಿ ಮಂಗಳೂರು ಸಮೀಪ ಲ್ಯಾಂಡಿಂಗ್ ಆಗುವಾಗ 150ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com