ನ್ಯೂಯಾರ್ಕ್: ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಮುಂಚೂಣಿಯಲ್ಲಿದ್ದು ಅಧ್ಯಕ್ಷೀಯ ಪದವಿಯ ಗೆಲುವಿಗೆ ಹತ್ತಿರದಲ್ಲಿದ್ದಾರೆ. ಪ್ರಮುಖ ರಾಜ್ಯಗಳಾದ ಮಿಚಿಗನ್ ಮತ್ತು ವಿಸ್ಕೊನ್ಸಿನ್ ಗಳಲ್ಲಿ ಜೊ ಬೈಡನ್ ಗೆಲುವಿನ ನಗೆ ಬೀರಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಜೊ ಬೈಡನ್, ಯಾರು ಕೂಡ ನಮ್ಮಿಂದ ಪ್ರಜಾಪ್ರಭುತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂದು, ಮುಂದು, ಎಂದೆಂದೂ. ಅಮೆರಿಕ ಸಾಕಷ್ಟು ಮುಂದೆ ಬಂದಿದೆ. ಹಲವು ಹೋರಾಟಗಳನ್ನು ಮಾಡಿದೆ. ಅದರಿಂದ ಗೆದ್ದು ಬಂದಿದೆ ಕೂಡ ಎಂದು ಟ್ವೀಟ್ ಮಾಡಿದ್ದಾರೆ.
ತಾವು ಅಧ್ಯಕ್ಷರಾಗಿ ಪುನರಾಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಗೊತ್ತಾಗುತ್ತಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣಾ ಪ್ರಕ್ರಿಯೆ ಮೇಲೆಯೇ ಆರೋಪ ಮಾಡಿದ್ದಾರೆ. ತಮ್ಮ ಮತಗಳನ್ನು ಕದಿಯಲಾಗಿದೆ ಎಂದಿದ್ದಾರೆ. ಆದರೆ ಇದಕ್ಕೆ ಟ್ರಂಪ್ ಬಳಿ ಸಾಕ್ಷಿ, ಪುರಾವೆಗಳಿಲ್ಲ. ಚುನಾವಣಾ ಕಾರ್ಯಕರ್ತರ ಮೇಲೆ ಆರೋಪ ಮಾಡಿದ್ದಾರೆ.
ಜಾರ್ಜಿಯಾ ರಾಜ್ಯದ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು ಟ್ರಂಪ್ 2 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ. ಒಂದು ಬಾರಿ ಟ್ರಂಪ್ ಪರ ಮುನ್ನಡೆಯಲ್ಲಿದ್ದ ಜಾರ್ಜಿಯಾದಲ್ಲಿ ಕೇವಲ 1,775 ಮತಗಳ ಮುನ್ನಡೆಯಲಿದ್ದಾರೆ. ಇಲ್ಲಿ ಶೇಕಡಾ 99ರಷ್ಟು ಮತ ಎಣಿಕೆ ಮುಗಿದಿದೆ. ಪೆನ್ಸಿಲ್ವೇನಿಯಾದಲ್ಲಿ 20 ಅಮೂಲ್ಯ ಎಲೆಕ್ಟೊರಲ್ ಕಾಲೇಜು ಮತಗಳನ್ನು ಪಡೆಯುವ ವಿಶ್ವಾಸದಲ್ಲಿ ಟ್ರಂಪ್ ಇದ್ದರೂ ಇದೀಗ ಅವರ ಮತಗಳು ಜೊ ಬೈಡನ್ ಗಿಂತ ಕೇವಲ 26 ಸಾವಿರ ಮತಗಳ ಅಂತರಕ್ಕೆ ಇಳಿದಿದೆ. ಜೊ ಬೈಡನ್ ಶೇಕಡಾ 60ರಿಂದ 90ರಷ್ಟು ಮತಗಳ ಗೆಲುವಿನ ಅಂತರದಲ್ಲಿದ್ದಾರೆ.
Advertisement