ಅಮೆರಿಕ ಚುನಾವಣೆ: ಜಾರ್ಜಿಯಾ, ನೆವೆಡಾದಲ್ಲಿ ಬೈಡನ್ ಮೇಲುಗೈ, ಟ್ರಂಪ್‌ ಸೋಲು ಬಹುತೇಕ ಖಚಿತ

ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣಾಹಣಿ ಹೋರಾಟ ರೋಚಕ ಘಟ್ಟ ತಲುಪಿದ್ದು, ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಜೋ ಬೈಡನ್
ಜೋ ಬೈಡನ್

ವಾಷಿಂಗ್ಟನ್: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣಾಹಣಿ ಹೋರಾಟ ರೋಚಕ ಘಟ್ಟ ತಲುಪಿದ್ದು, ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಮುಂಚೂಣಿಯಲ್ಲಿದ್ದು, ಇದೀಗ ಜಾರ್ಜಿಯಾ ಹಾಗೂ ನೆವಾಡಾದಲ್ಲೂ ಮೇಲುಗೈ ಸಾಧಿಸಿದ್ದು, ಬೈಡನ್ ವೈಟ್ ಹೌಸ್ ಹಾದಿ ಮತ್ತಷ್ಟು ಸುಗಮವಾಗಿದೆ.

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಂದ ಸಾಕಷ್ಟು ಮುಂದಿರುವ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡನ್ ಜಾರ್ಜಿಯಾ ಹಾಗೂ ನೆವಾಡಾದಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಗಾದಿ ಮತ್ತೊಮ್ಮೆ ವಶಪಡಿಸಿಕೊಳ್ಳಬೇಕೆಂಬ ಡೋನಾಲ್ಡ್ ಟ್ರಂಪ್‌ನ ಆಸೆಯನ್ನು ಸಂಪೂರ್ಣವಾಗಿ ಛಿದ್ರಗೊಳಿಸಿದಂತಾಗಿದೆ. ಜಾರ್ಜಿಯಾದಲ್ಲಿ (16), ಈಗಾಗಲೇ ಶೇ 99 ರಷ್ಟು ಮತಗಳನ್ನು ಎಣಿಸಲಾಗಿದೆ.
 
ಇದೇ ಪ್ರವೃತ್ತಿ ಮುಂದುವರಿದರೆ, ಜಾರ್ಜಿಯಾ ಜೋ ಬೈಡನ್ ಕೈ ವಶವಾಗುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಅಲ್ಲಿ ಗೆಲವು ಖಚಿತವಾದರೆ, ಅಮೆರಿಕಾ ಅಧ್ಯಕ್ಷ ಸ್ಥಾನ ಜೋ ಬೈಡನ್ ಅವರ ವಶವಾಗಲಿದೆ. ಇನ್ನೂ ನೆವೆಡಾದಲ್ಲೂ ಗೆದ್ದಿದ್ದೇ ಆದರೆ ಜೋ ಬೈಡನ್ ಪಡೆಯಲಿರುವ ಮತಗಳ ಸಂಖ್ಯೆ 290ಕ್ಕೆ ತಲುಪಲಿದೆ. ಜಾರ್ಜಿಯಾ ಫಲಿತಾಂಶ ಹೊರಬಂದರೆ, ಜಗತ್ತಿನ 'ದೊಡ್ಡಣ್ಣ” ಅಮೆರಿಕಾದ ಮುಂದಿನ ಅಧ್ಯಕ್ಷ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಜೊ ಬೈಡನ್, ಯಾರು ಕೂಡ ನಮ್ಮಿಂದ ಪ್ರಜಾಪ್ರಭುತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂದು, ಮುಂದು, ಎಂದೆಂದೂ. ಅಮೆರಿಕ ಸಾಕಷ್ಟು ಮುಂದೆ ಬಂದಿದೆ. ಹಲವು ಹೋರಾಟಗಳನ್ನು ಮಾಡಿದೆ. ಅದರಿಂದ ಗೆದ್ದು ಬಂದಿದೆ ಕೂಡ ಎಂದು ಹೇಳಿದ್ದರು.

ಇನ್ನು ತಾವು ಅಧ್ಯಕ್ಷರಾಗಿ ಪುನರಾಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಗೊತ್ತಾಗುತ್ತಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣಾ ಪ್ರಕ್ರಿಯೆ ಮೇಲೆಯೇ ಆರೋಪ ಮಾಡಿದ್ದಾರೆ. ತಮ್ಮ ಮತಗಳನ್ನು ಕದಿಯಲಾಗಿದೆ ಎಂದಿದ್ದಾರೆ. ಆದರೆ ಇದಕ್ಕೆ ಟ್ರಂಪ್ ಬಳಿ ಸಾಕ್ಷಿ, ಪುರಾವೆಗಳಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com