ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ: ಮಾಜಿ ಅಧ್ಯಕ್ಷ ಬುಷ್
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಾಥಮಿಕವಾಗಿ ಯಾವುದೇ ಭ್ರಷ್ಟಾಚಾರಗಳು ಇಲ್ಲದೆ ನಡೆದಿವೆ ಎಂದು ಅಮೆರಿಕ ಜನರು ವಿಶ್ವಾಸವಿರಿಸಬಹುದು ಎಂದು ರಿಪಬ್ಲಿಕನ್ ಪಕ್ಷದ ನಾಯಕ, ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ಹೇಳಿದ್ದಾರೆ.
ಜನರ ತೀರ್ಪು ಸ್ಪಷ್ಟವಾಗಿದೆ. ಆದರೆ, ದೇಶಕ್ಕಾಗಿ ಎಲ್ಲರೂ ಒಗ್ಗೂಡಬೇಕೆಂದು ಅವರು ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅವರು ಅಮೆರಿಕ ಅಧ್ಯಕ್ಷರಾಗಿ ಚುನಾಯಿತಗೊಂಡಿರುವ ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬೈಡೆನ್ ಅವರನ್ನು ಅಭಿನಂದಿಸಿದ್ದಾರೆ. ರಿಪಬ್ಲಿಕನ್ ಪಕ್ಷದಲ್ಲಿ ತಮ್ಮ ನಂತರ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದ ಟ್ರಂಪ್ ಅವರನ್ನು ಬುಷ್ ಅಭಿನಂದಿಸಿದ್ದಾರೆ.
70 ದಶ ಲಕ್ಷ ಮತ ಗಳಿಸುವುದು ರಾಜಕೀಯವಾಗಿ ದೊಡ್ಡ ಜಯ ಎಂದು ಬುಷ್ ವಿಶ್ಲೇಷಿಸಿದ್ದಾರೆ. ಅಲ್ಲದೆ ಮರು ಎಣಿಕೆಗೆ ಕೋರುವ ಜತೆಗೆ ಫಲಿತಾಂಶಗಳ ಬಗ್ಗೆ ಕಾನೂನು ರೀತ್ಯಾ ಹೋರಾಡುವ ಹಕ್ಕು ಡೋನಾಲ್ಡ್ ಟ್ರಂಪ್ ಅವರು ಹೊಂದಿದ್ದಾರೆ ಎಂದು ಬುಷ್ ಹೇಳಿದ್ದಾರೆ.
ಬೈಡನ್ ಅವರ ಜಯವನ್ನು ಗುರುತಿಸಿ ಅಭಿನಂದಿಸಿದ ಪ್ರಮುಖ ರಿಪಬ್ಲಿಕನ್ ನಾಯಕರಲ್ಲಿ ಬುಷ್ ಅವರು ಒಬ್ಬರು. ರಿಪಬ್ಲಿಕನ್ ಪಕ್ಷದ ಪರವಾಗಿ 2016 ರಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲು ಪೈಪೋಟಿ ನಡೆಸಿದ್ದ ಬುಷ್ ಅವರ ಸಹೋದರ ಜೆಬ್ ಬುಷ್ ಈಗಾಗಲೇ ಬೈಡೆನ್ ಅವರನ್ನು ಅಭಿನಂದಿಸಿದ್ದಾರೆ. ಮತ್ತಷ್ಟು ರಿಪಬ್ಲಿಕನ್ ಸೆನೆಟರ್ ಗಳು ಸಹ ಬೈಡನ್ ಆಯ್ಕೆ ಸ್ವಾಗತಿಸಿ, ಅವರನ್ನು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ