ಗಡೀಪಾರು ಆದೇಶದಲ್ಲಿ ಹಲವು ದೋಷಗಳು: ಇಂಗ್ಲೆಂಡ್ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ಪರ ವಕೀಲೆ ವಾದ 

ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಭಾರತಕ್ಕೆ ಹಸ್ತಾಂತರ ಆರೋಪ ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ ಲಂಡನ್ ನ ರಾಯಲ್ ಕೋರ್ಟ್ ಆಫ್ ಜಸ್ಟೀಸ್ ಮುಂದೆ ವಿಚಾರಣೆಗೆ ಹಾಜರಾದರು.
ವಿಜಯ್ ಮಲ್ಯ(ಸಂಗ್ರಹ ಚಿತ್ರ)
ವಿಜಯ್ ಮಲ್ಯ(ಸಂಗ್ರಹ ಚಿತ್ರ)

ಲಂಡನ್: ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಭಾರತಕ್ಕೆ ಹಸ್ತಾಂತರ ಆರೋಪ ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ ಲಂಡನ್ ನ ರಾಯಲ್ ಕೋರ್ಟ್ ಆಫ್ ಜಸ್ಟೀಸ್ ಮುಂದೆ ವಿಚಾರಣೆಗೆ ಹಾಜರಾದರು. ವಿಚಾರಣೆ ವೇಳೆ ಮಲ್ಯ ಪರ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದಲ್ಲಿ ಹಲವು ದೋಷಗಳು ಆಗಿವೆ ಎಂದು ಪ್ರತಿಪಾದಿಸಿದರು.


64 ವರ್ಷದ ಕಿಂಗ್ ಫಿಶರ್ ಏರ್ ಲೈನ್ಸ್ ನ ಮಾಜಿ ಮಾಲೀಕ ವಿಜಯ್ ಮಲ್ಯ ವಿರುದ್ಧ 2017ರ ಏಪ್ರಿಲ್ ನಲ್ಲಿ ಭಾರತಕ್ಕೆ ಗಡೀಪಾರು ಮಾಡುವ ಕುರಿತು ಬಂಧನ ವಾರಂಟ್ ಜಾರಿಯಾಗಿತ್ತು. ಇದಕ್ಕೆ ವಿರುದ್ಧವಾಗಿ ಕೋರ್ಟ್ ಗೆ ಹೋಗಿ ಸದ್ಯ ಜಾಮೀನಿನಲ್ಲಿರುವ ವಿಜಯ್ ಮಲ್ಯ ನಿನ್ನೆ ಕೋರ್ಟ್ ಗೆ ಹೋಗುವಾಗ ಸುದ್ದಿಗಾರರ ಎಂದಿನ ಪ್ರಶ್ನೆಗಳ ಕಿರಿಕಿರಿಯನ್ನು ತಪ್ಪಿಸಿಕೊಂಡು ತಮ್ಮ ಪರ ವಕೀಲೆ ಜೊತೆ ಪ್ರತ್ಯೇಕವಾಗಿ ಕೋರ್ಟ್ ಒಳಗೆ ಹೋದರು.


ವಿಚಾರಣೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ನಾನು ಇಲ್ಲಿಗೆ ಕೇವಲ ವಿಚಾರಣೆಗೆ ಬಂದಿದ್ದೇನೆ ಎಂದು ಮಾತ್ರ ಹೇಳಿದರು. ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದು 2018ರ ಡಿಸೆಂಬರ್ ನಲ್ಲಿ ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮ ಅರ್ಜುಥ್ನಾಟ್ ನೀಡಿದ ತೀರ್ಪಿನಲ್ಲಿ ದೋಷವಿದ್ದು, ಭಾರತ ಸರ್ಕಾರ ಸಲ್ಲಿಸಿದ ಕೆಲವು ಸಾಕ್ಷಿ ಹೇಳಿಕೆಗಳನ್ನು ಸಹ ಮಲ್ಯ ಪರ ವಕೀಲರು ನಿನ್ನೆ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದರು. 


ನಿನ್ನೆ ಕೋರ್ಟ್ ನಲ್ಲಿ ವಾದ ಮಂಡಿಸಿದ ಮಲ್ಯ ಪರ ವಕೀಲೆ ಕ್ಲೇರ್ ಮೊಂಟ್ಗೊಮರಿ, ವ್ಯಾಪಾರದಲ್ಲಿ ಕುಸಿಯುತ್ತಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ ನ್ನು ಮೇಲೆತ್ತಲು ಮಲ್ಯ ಅವರು ಬ್ಯಾಂಕ್ ಸಾಲವನ್ನು ಪಡೆದಿದ್ದರೇ ಹೊರತು ಬ್ಯಾಂಕ್ ಸಾಲ ತೆಗೆದುಕೊಳ್ಳುವ ಸಮಯದಲ್ಲಿ ಅವರ ಮನಸ್ಸಿನಲ್ಲಿ ಯಾವ ದುರುದ್ದೇಶವೂ ಇರಲಿಲ್ಲ. ಆ ಸಮಯದಲ್ಲಿ ಅವರು ಶ್ರೀಮಂತ ಉದ್ಯಮಿಯಾಗಿದ್ದರು ಕೂಡ. ಯಾವುದೇ ವಂಚನೆಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು, ಅವ್ಯವಹಾರ ನಡೆಸುವ ಕೆಲಸ ಅವರು ಮಾಡಲಿಲ್ಲ, ಭಾರತದ ಇತರ ವಿಮಾನಯಾನ ಸಂಸ್ಥೆಗಳಂತೆ ಪ್ರತಿಷ್ಠಿತ ಏರ್ ಲೈನ್ ಆಗಿದ್ದ ಕಿಂಗ್ ಫಿಶರ್ ಆರ್ಥಿಕವಾಗಿ ಕುಸಿಯಿತು ಎಂದು ಹೇಳಿದರು.


ಈ ವಿಚಾರಣೆ ಮೂರು ದಿನಗಳಿಂದ ನಡೆಯುತ್ತಿದ್ದು ಭಾರತ ಸರ್ಕಾರದ ಪರವಾಗಿ ಇಂದು ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್(ಸಿಪಿಎಸ್) ಲಂಡನ್ ಕೋರ್ಟ್ ನಲ್ಲಿ ಪ್ರತಿವಾದ ಮಂಡಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com