ಭಾರತದ ವಿರುದ್ಧ ಆರೋಪ: ನೇಪಾಳ ಪ್ರಧಾನಿ ರಾಜೀನಾಮೆಗೆ ಆಡಳಿತಾರೂಢ ಪಕ್ಷದಿಂದಲೇ ಆಗ್ರಹ!

ನೇಪಾಳದ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಅವರದ್ದೇ ಭಾರತ ವಿರೋಧಿ ಹೇಳಿಕೆ ಮುಳುವಾಗಿದೆ.
ಕೆ.ಪಿ. ಶರ್ಮಾ ಒಲಿ
ಕೆ.ಪಿ. ಶರ್ಮಾ ಒಲಿ

ಕಠ್ಮಂಡು: ನೇಪಾಳದ ಪ್ರಧಾನಿ ಕೆಪಿ ಶರ್ಮಾ ಒಲಿಗೆ ಅವರದ್ದೇ ಭಾರತ ವಿರೋಧಿ ಹೇಳಿಕೆ ಮುಳುವಾಗಿದೆ.

ನೇಪಾಳದ ಸರ್ಕಾರ ಅಲ್ಲಿನ ಭೂಪಟವನ್ನು ಬದಲಾವಣೆ ಮಾಡಿ ಭಾರತದ ಭಾಗವನ್ನು ಸೇರಿಸಿಕೊಂಡಿದ್ದಕ್ಕೆ ನೇಪಾಳದ ರಾಜಕೀಯ ಪಕ್ಷಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಇದಾದ ಬಳಿಕ ಸ್ವತಃ ಕೆಪಿ ಶರ್ಮಾ ಒಲಿ ಭಾರತ ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. 

ಪ್ರಧಾನಿ ಕೆಪಿ ಶರ್ಮಾ ಒಲಿ ಭಾರತದ ವಿರುದ್ಧ ಷಡ್ಯಂತ್ರದ ಆರೋಪ ಮಾಡಿದ್ದನ್ನು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ನಾಯಕರು ಖಂಡಿಸಿದ್ದು, ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. 

ಪ್ರಧಾನಿ ನಿವಾಸದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ನೇಪಾಳದ ಮಾಜಿ ಪ್ರಧಾನಿ ಪುಷ್ಪಕಮಲ್ ದಹಲ್ (ಪ್ರಚಂಡ) ಕೆಪಿ ಶರ್ಮಾ ಒಲಿಯವರ ಭಾರತ ವಿರೋಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿಗಳ ಹೇಳಿಕೆ ರಾಜಕೀಯವಾಗಿಯೂ ಹಾಗೂ ರಾಜತಾಂತ್ರಿಕವಾಗಿಯೂ ಸರಿಯಾದುದ್ದಲ್ಲ, ಇಂತಹ ಹೇಳಿಕೆಗಳಿಂದ ನೆರೆಯ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧ ಹಾಳಾಗುತ್ತದೆ ಎಂದು ಪ್ರಚಂಡ ಎಚ್ಚರಿಸಿದ್ದಾರೆ.

ತಮ್ಮನ್ನು ಪದಚ್ಯುತಗೊಳಿಸಲು ಭಾರತ ಹಾಗೂ ತಮ್ಮದೇ ಪಕ್ಷದ ಮುಖಂಡರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬ ಆರೋಪವನ್ನು ಕೆ.ಪಿ ಶರ್ಮಾ ಒಲಿ ಸಾಬೀತುಪಡಿಸಲಿ ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪಕ್ಷದ ಹಿರಿಯ ಮುಖಂಡರಾದ ಮಾಧವ್ ಕುಮಾರ್ ನೇಪಾಳ್, ಝಲನಾಥ್ ಖನಾಲ್, ಪಕ್ಷದ ಉಪಾಧ್ಯಕ್ಷ ಬಮ್ದೇವ್ ಗೌತಮ್ ಹಾಗೂ ವಕ್ತಾರ ನಾರಾಯಣ್ಕಾಜಿ ಶ್ರೇಷ್ಠ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com