
ಜಾಮ್ನಗರ್: ಕಚೇರಿ ಮುಚ್ಚಿದೆ ಎಂದ ಮಾತ್ರಕ್ಕೆ ತಾವು ಅಫ್ಘಾನಿಸ್ತಾನದ ಜನರನ್ನು ಕೈಬಿಟ್ಟಿದ್ದೇವೆ ಎಂದರ್ಥವಲ್ಲ. ಅವರೊಂದಿಗೆ ನಮ್ಮ ಸಂವಹನವನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ ಎಂದು ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಹೇಳಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಮತ್ತು ಇತರ ಭಾರತೀಯರೊಂದಿಗೆ ಭಾರತಕ್ಕೆ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಟಂಡನ್, "ಪರಿಸ್ಥಿತಿ ತುಂಬಾ ಬದಲಾಗುತ್ತಿರುವುದರಿಂದ ಮುಂದಿನ ನಡೆಯನ್ನು ಈಗಲೇ ಹೇಳಲು ಸಾಧ್ಯವಿಲ್ಲ" ಎಂದು ಅವರು ಹೇಳಿರುವುದು ಭಾರತದ ಮುಂದಿನ ನಡೆ ಕುರಿತು ಕುತೂಹಲ ಮೂಡಿಸಿದೆ.
ಇದೇ ವೇಳೆ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಭಾರತೀಯರ ಪರಿಸ್ಥಿತಿಯ ಬಗ್ಗೆಯೂ ಅವರು ಮಾತನಾಡಿದ್ದು ಅಲ್ಲಿ ಇನ್ನೂ ಕೆಲವು ಭಾರತೀಯರು ಇದ್ದಾರೆ ಮತ್ತು ಅಲ್ಲಿಗೆ ಏರ್ ಇಂಡಿಯಾ ತನ್ನ ವಾಣಿಜ್ಯ ಸೇವೆಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿಯೂ ತಮ್ಮನ್ನು ಸುರಕ್ಷಿತವಾಗಿ ಮರಳಿ ಕರೆತಂದಿದ್ದಕ್ಕಾಗಿ ಭಾರತೀಯ ವಾಯುಪಡೆಗೆ ಟಂಡನ್ ಧನ್ಯವಾದ ಅರ್ಪಿಸಿದರು.
ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಸ್ಥಿತಿ ತುಂಬಾ ಜಟಿಲವಾಗಿದೆ ಮತ್ತು ಈಗ ಪರಿಸ್ಥಿತಿ ಸಾಕಷ್ಟು ಅಪಾಯಕಾರಿಯಾಗಿದೆ ಎಂದರು. ಕಾಬುಲ್ ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಗಳಿಂದಾಗಿ ಏರ್ ಇಂಡಿಯಾ ತನ್ನ ವಾಣಿಜ್ಯ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಆದರೆ, ಅಲ್ಲಿ ಯಾರಾದರೂ ಭಾರತೀಯರು ಸಿಲುಕಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಹಾಯ ಕೇಂದ್ರ ತೆರೆದಿದೆ. ಕಾಬೂಲ್‌ನಲ್ಲಿ ಇನ್ನೂ ಕೆಲ ಭಾರತೀಯರು ಉಳಿದುಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸೇವೆಗಳು ಪುನರಾರಂಭವಾದಾಗ ಅವುಗಳನ್ನು ಮರಳಿ ತರಲಾಗುವುದು ಎಂದರು.
ಅನೇಕ ಭಾರತೀಯರು ತಮ್ಮನ್ನು ನೋಂದಾಯಿಸಿಕೊಳ್ಳದಿರುವುದು ಈಗ ಸಮಸ್ಯೆಯಾಗಿದೆ. ವಿಶೇಷವಾಗಿ ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ರಾಜಕೀಯ ಪರಿಸ್ಥಿತಿಯು ಬದಲಾಗುವ ಸಾಧ್ಯತೆಗಳಿರುವುದರಿಂದ ಭಾರತೀಯ ನಾಗರಿಕರು ತಮ್ಮನ್ನು ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವುದು ಮುಖ್ಯ. ಇಂತಹ ಸಂದರ್ಭದಲ್ಲಿ ಅವರನ್ನು ಅಲ್ಲಿಂದ ಹೊರತರಲು ನೆರವಾಗುತ್ತದೆ ಎಂದರು. ಭಾನುವಾರ, ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿತು, ಇದು ಅಲ್ಲಿನ ಅಶ್ರಫ್ ಘನಿ ಸರ್ಕಾರದ ಪತನಕ್ಕೆ ಕಾರಣವಾಯಿತು.
Advertisement