ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಗತ್ಯ ವಸ್ತುಗಳಿಗಿಂತ ಹೆಚ್ಚಾಗಿ ಬುರ್ಖಾ ಖರೀದಿಗೆ ಮುಗಿಬೀಳುತ್ತಿರುವ ಆಫ್ಘನ್ನರು

ಆಫ್ಘನ್ನರಿಗೆ ಕೊರೊನಾ ಮೇಲೆ ಭಯವೇ ಇಲ್ಲ. ಏಕೆಂದರೆ ಕೊರೊನಾ ವೈರಾಣು ಮನುಷ್ಯನನ್ನು ಕೊಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ತಾಲಿಬಾನಿಗಳು ತಾವಂದುಕೊಂಡ ಕ್ಷಣದಲ್ಲೇ ಯಾರನ್ನು ಬೇಕಾದರೂ ಕೊಲ್ಲಬಹುದು. ಕಾಬೂಲಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ವ್ಯಕ್ತಿಯಿಂದ ಅಲ್ಲಿನ ಸ್ಥಿತಿಗತಿಯ ಅನಾವರಣ. 

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಗದ್ದುಗೆಗೆ ಏರುವುದನ್ನು ಇಡೀ ಜಗತ್ತೇ ಭಯಾತಂಕದಿಂದ ನೋಡುತ್ತಿರುವ ಈ ಹೊತ್ತಿನಲ್ಲಿ ರಾಜಧಾನಿ ಕಾಬೂಲ್ ಒಂದರಲ್ಲೇ 1500 ಭಾರತೀಯರು ಸಿಲುಕಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ದೂರವಾಣಿ ಕರೆಯ ಮೂಲಕ ಅಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತ ತನ್ನ ರಾಜತಾಂತ್ರಿಕ ಕಚೇರಿಯನ್ನು ಈಗಾಗಲೇ ಸ್ಥಳಾಂತರಿಸಿರುವುದರಿಂದ ಈಗ ದೇಶವನ್ನು ಸಂಪರ್ಕಿಸಲು ಯಾವುದೇ ಆತಂಕ ಇಲ್ಲವಾದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳ ಭಯದಿಂದಾಗಿ 29ರ ಪ್ರಾಯದ ಕೇರಳಿಗ ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸಿಲ್ಲ. ಅವರು ಅಮೆರಿಕ ಮೂಲದ ಆಹಾರೋತ್ಪನ್ನ ಸಂಸ್ಥೆಯ ಅಧಿಕಾರಿಯಾಗಿ ಕಾಬೂಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಭಾರತಕ್ಕೆ ಮರಳುವ ಎಲ್ಲಾ ಬಾಗಿಲುಗಳೂ ಮುಚ್ಚಿರುವ ಬಗ್ಗೆ ಚಿಂತಿತರಾಗಿದ್ದಾರೆ. 

ಕಾಬೂಲಿನಲ್ಲಿ ಭಾರತೀಯರ ಸ್ಥಿತಿಗತಿ

ದಿನದಿಂದ ದಿನಕ್ಕೆ ರಾಜಧಾನಿ ಕಾಬೂಲಿನ ಸ್ಥಿತಿ ಹದಗೆಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಕಾಬೂಲಿನಲ್ಲಿ ನೆಲೆಸಿರುವ ಭಾರತೀಯರು ಒಂದು ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಆ ಗ್ರೂಪಿನಲ್ಲಿ ತಮ್ಮೆಲ್ಲಾ ಸುಖ ದುಃಖಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕ್ಷಣ ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಯಾರಾದರೂ ಸಂಕಷ್ಟದಲ್ಲಿದ್ದರೆ ಅವರಿಗೆ ನೆರವನ್ನು ಒದಗಿಸುವ ಕೆಲಸವೂ ಆಗುತ್ತಿದೆ. ಭಾರತಕ್ಕೆ ಮರಳುವ ಬಗ್ಗೆ ಅವರೆಲ್ಲರೂ ತುದಿಗಾಲಲ್ಲಿ ನಿಂತಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಆಗುತಿಲ್ಲ. ಸದ್ಯ 41 ಕೇರಳ ಮೂಲದ ವ್ಯಕ್ತಿಗಳು ಕಾಬೂಲಿನಲ್ಲಿ ಇರುವುದನ್ನು ಪತ್ತೆಹಚ್ಚಲಾಗಿದ್ದು. ಒಟ್ಟು 1500 ಭಾರತೀಯರು ಕಾಬೂಲಿನಲ್ಲಿ ಸಿಕ್ಕಿಕೊಂಡಿರುವುದಾಗಿ ಹೆಸರು ಹೇಳಲಿಚ್ಛಿಸದ ವ್ಯಕ್ತಿ ತಿಳಿಸಿದ್ದಾರೆ. 

ಭಾರತೀಯರ ಮೇಲೆ ದಾಳಿಗಳಾಗಿವೆಯೇ?

ಇದುವರೆಗೂ ಭಾರತೀಯರ ಮೇಲೆ ದಾಳಿಯಾಗಲಿ, ಹಲ್ಲೆಯಾಗಲಿ ನಡೆದಿರುವುದು ವರದಿಯಾಗಿಲ್ಲ. ಮಂಗಳವಾರ ತಾವು ನೆಲೆಸಿದ್ದ ಮನೆಯ ಹಿಂಭಾಗಕ್ಕೆ ತಾಲಿಬಾನಿಗಳು ಬಂದು ಮನೆಯೊಂದನ್ನು ಶೋಧಿಸಿದ್ದಾಗಿ ಅವರು ಹೇಳಿದ್ದಾರೆ. ಈ ಹಿಂದಿನ ಆಫ್ಘನ್ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಆ ಮನೆಯಲ್ಲಿ ನೆಲೆಸಿದ್ದರು. ಅವರಿಗಾಗಿ ತಾಲಿಬಾನಿಗಳಿ ಹುಡುಕಾಟ ನಡೆಸಿದ್ದಾರೆ. ತಾಲಿಬಾನಿಗಳು ಬಂದು ಹೋಗುವ ತನಕ ತಾವು ಬಾಗಿಲಿಗೆ ಚಿಲಕ ಹಾಕಿ ಟೇಬಲ್ ಕೆಳಗೆ ಅವಿತುಕೊಂಡಿದ್ದಾಗಿ ಹೇಳಿದ್ದಾರೆ. 

ಬುರ್ಖಾ ಖರೀದಿಗೆ ಮುಗಿಬಿದ್ದ ಜನ

ಮನೆಯಿಂದ ಆಚೆಗೆ ಕಾಲಿಡಲು ಜನರು ಹೆದರಿಕೊಂಡಿದ್ದಾರೆ. ಮನೆಗೆ ಬೇಕಾದ ಅಗತ್ಯ ಸಾಮಾನುಗಳನ್ನು ತರಲೂ ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೆ ಬದಲಾಗಿ ಬುರ್ಖಾಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಅಫ್ಘಾನಿಸ್ತಾನದ ಸಾಂಪ್ರದಾಯಿಕ ದಿರಿಸಾದ ಬುರ್ಖಾಗೆ ಈಗ ಅತ್ಯಧಿಕ ಬೇಡಿಕೆ ಕಂಡುಬಂಡಿದೆ. ಕಳೆದ ಬಾರಿ ತಾಲಿಬಾನ್ ಆಡಳಿತ ಜಾರಿಯಲ್ಲಿದ್ದಾಗ ಮಹಿಳೆಯರು ಕಡ್ಡಾಯವಾಗಿ ಬುರ್ಖಾ ಧರಿಸುವಂತೆ ತಾಲಿಬಾನಿಗಳು ಕಟ್ತಪ್ಪಣೆ ಹೊರಡಿಸಿದ್ದರು. ಬುರ್ಖಾ ಧರಿಸದೇ ಪರಪುರುಷರಿಗೆ ಮುಖ ತೋರಿಸುವುದನ್ನು ತಾಲಿಬಾನಿಗಳು ಸಹಿಸಿರಲಿಲ್ಲ. ಅಂಥಾ ಮಹಿಳೆಯರಿಗೆ ಶಿಕ್ಷೆಯನ್ನು ವಿಧಿಸುತ್ತಿದ್ದರು. ಹೀಗಾಗಿ ಜನರು ಬುರ್ಖಾ ಖರೀದಿಸಲು ಮುಗಿಬೀಳುತ್ತಿದ್ದಾರೆ. 

ತಾಲಿಬಾನ್ ಮುಂದೆ ಕೊರೊನಾ ಏನೇನೂ ಅಲ್ಲ

ಆಫ್ಘನ್ನರಿಗೆ ಕೊರೊನಾ ಮೇಲೆ ಭಯವೇ ಇಲ್ಲ. ಏಕೆಂದರೆ ಕೊರೊನಾ ವೈರಾಣು ಮನುಷ್ಯನನ್ನು ಕೊಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಯಾರನ್ನೂ ಅದು ಕ್ಷಣಮಾತ್ರದಲ್ಲಿ ಕೊಲ್ಲುವುದಿಲ್ಲ. ಆದರೆ ತಾಲಿಬಾನಿಗಳು ತಾವಂದುಕೊಂಡ ಕ್ಷಣದಲ್ಲೇ ಯಾರನ್ನು ಬೇಕಾದರೂ ಕೊಲ್ಲುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಅದು ಈ ಹಿಂದೆ ಸಾಬೀತಾಗಿಯೂ ಇದೆ. ಹೀಗಾಗಿ ಜನರು ಕೊರೊನಾಗಿಂತ ಮಿಗಿಲಾಗಿ ತಾಲಿಬಾನಿಗಳನ್ನು ಕಂಡರೆ ಭಯ ಬೀಳುವಂತಾಗಿದೆ. ಹೀಗಾಗಿ ಅಲ್ಲಿ ನೆಲೆಸಿರುವ ಭಾರತೀಯರು ತುರ್ತು ಸ್ಥಳಾಂತರ ಕಾರ್ಯಾಚರಣೆಯನ್ನು ಭಾರತ ಸರ್ಕಾರದಿಂದ ನಿರೀಕ್ಷಿಸುತ್ತಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com