ಅಸಾಧಾರಣ ಕಾರ್ಯಕ್ಷಮತೆ: ಸುಡಾನ್ ನಲ್ಲಿ ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಪದಕ
ನವದೆಹಲಿ: ಸುಡಾನ್ ನಲ್ಲಿರುವ ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಪದಕಗಳನ್ನು ನೀಡಿ ಗೌರವಿಸಿದೆ. ಶಾಂತಿ ಪಾಲನೆಯಲ್ಲಿ ಭಾರತೀಯ ಸೇನೆ ಯೋಧರ ಕಾರ್ಯಕ್ಷಮತೆ, ಸೇವೆಗಳನ್ನು ಗುರುತಿಸಿ ವಿಶ್ವಸಂಸ್ಥೆ ಪದಕಗಳನ್ನು ನೀಡಿ ಗೌರವಿಸಿದೆ.
ಭಾರತವಷ್ಟೇ ಅಲ್ಲದೇ ಶ್ರೀಲಂಕಾದ ಶಾಂತಿಪಾಲಕರನ್ನೂ ಸಹ ವಿಶ್ವಸಂಸ್ಥೆ ಗೌರವಿಸಿದೆ. ದಕ್ಷಿಣ ಸುಡಾನ್ ನಲ್ಲಿ ವಿಶ್ವಸಂಸ್ಥೆಯಿಂದ ನಿಯೋಜಿಸಲ್ಪಟ್ಟಿರುವ 135 ಮಂದಿ ಭಾರತೀಯರನ್ನು ಬ್ಲೂ ಬೆರೆಟ್ಸ್ ಎಂದು ಕರೆಯಲಾಗುತ್ತದೆ.
ಪದಕ ನೀಡುವ ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಅಧಿಕಾರಿಯೂ ಆಗಿರುವ ವಿಶ್ವಸಂಸ್ಥೆ ಪಡೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಶೈಲೇಶ್ ದಿನಕರ್ ಭಾಗಿಯಾಗಿದ್ದರು.
ಈ ಸವಾಲಿನ ಪರಿಸ್ಥಿತಿಯಲ್ಲಿ ಯುಎನ್ ಮಿಷನ್ ಇನ್ ಸೌತ್ ಸುಡಾನ್ (ಯುಎನ್ಎಂಐಎಸ್ಎಸ್) ಮ್ಯಾನ್ಡೇಟ್ ನ್ನು ಪೂರ್ಣಗೊಳಿಸುವುದಕ್ಕೆ ಕೊಡುಗೆ ನೀಡಿದ ಎಲ್ಲಾ ಸೇನಾ ಅಧಿಕಾರಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಲೆಫ್ಟಿನೆಂಟ್ ಜನರಲ್ ಶೈಲೇಶ್ ದಿನಕರ್ ಹೇಳಿದ್ದಾರೆ.
ಯುಎನ್ಎಂಐಎಸ್ಎಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದು, ಭಾರತದ ಜನತೆಗೆ ಧನ್ಯವಾದಗಳು, ನಿಮ್ಮ ಸೇನೆಯ 135 ಶಾಂತಿಪಾಲಕರ ಪಡೆ ಜೊಂಗ್ಲೀ ರಾಜ್ಯ ಹಾಗೂ ಗ್ರೇಟರ್ ಪಿಬೋರ್ ಅಡ್ಮಿನಿಸ್ಟ್ರೇಟೀವ್ ಪ್ರದೇಶದಲ್ಲಿನ ತಮ್ಮ ಅದ್ಭುತ ಕಾರ್ಯಕ್ಷಮತೆಗಾಗಿ ಪದಕಗಳನ್ನು ಸ್ವೀಕರಿಸಿದ್ದಾರೆ #ServingForPeace ಎಂದು ಟ್ವೀಟ್ ಮಾಡಿ ಭಾರತೀಯ ಸೇನೆಗೆ ಧನ್ಯವಾದ ತಿಳಿಸಿದೆ. ಸುಡಾನ್ ನಲ್ಲಿನ ಹಿಂಸಾಚಾರದ ಪರಸ್ಥಿತಿಗಳಿಂದ ನಾಗರಿಕರನ್ನು ರಕ್ಷಿಸುವ, ಸಿವಿಲ್-ಮಿಲಿಟರಿ ಸಹಕಾರದ ಚಟುವಟಿಕೆಗಳಲ್ಲಿ ಭಾರತೀಯ ಸೇನೆ ತೊಡಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ