ಪಿಎಂ ಆಗಿ ಆಯ್ಕೆಗೊಂಡ ಕೆಲ ಹೊತ್ತಿನಲ್ಲೇ ರಾಜೀನಾಮೆ ನೀಡಿದ ಸ್ವೀಡನ್ ಮೊದಲ ಮಹಿಳಾ ಪ್ರಧಾನಿ! ಕಾರಣ ಏನು?
ಕೋಪನ್ ಹೇಗನ್: ಸ್ವೀಡನ್ ನ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಗೊಂದು ಇತಿಹಾಸ ನಿರ್ಮಿಸಿದ್ದ 54 ವರ್ಷದ ಮ್ಯಾಗ್ಡಲೀನಾ ಆಂಡರ್ಸನ್ ಅವರು ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬುಧವಾರ ಸಂಸತ್ತಿನಲ್ಲಿ ಅವರು ಮಂಡಿಸಿದ್ದ ಬಜೆಟ್ ವಿಫಲವಾಗಿದ್ದರಿಂದ ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರದಿಂದ ಗ್ರೀನ್ಸ್ ಪಕ್ಷ ನಿರ್ಗಮಿಸಿರುವುದು ಇದಕ್ಕೆ ಕಾರಣವಾಗಿದೆ.
ಇದಕ್ಕೂ ಮೊದಲು, ನೂತನ ಪ್ರಧಾನಿಯಾಗಿ ಮ್ಯಾಗ್ಡಲೇನಾ ಅವರನ್ನು ಸ್ವೀಡಿಷ್ ಸಂಸತ್ತು "ರಿಕ್ಸ್ ಡಾಗ್" ಅನುಮೋದನೆ ನೀಡಿತ್ತು. ದೇಶದ ಹಣಕಾಸು ಸಚಿವೆಯಾಗಿದ್ದ ಮ್ಯಾಗ್ಡಲೀನಾ ಇತ್ತೀಚಿಗೆ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಸ್ವೀಡನ್ ಪ್ರಧಾನಿ, ಪಕ್ಷದ ನಾಯಕ ಸ್ಟೀಫನ್ ಲ್ಫ್ವೆನ್ ಎರಡು ದಿನಗಳ ಹಿಂದೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಮ್ಯಾಗ್ಡಲೀನಾ ಅವರು ಹಣಕಾಸು ಸಚಿವೆಯಾಗಿದ್ದಾಗ ಮಂಡಿಸಿದ್ದ ಬಜೆಟ್ ಅನ್ನು ಸಂಸತ್ತು ಅಂಗೀಕರಿಸಲಿಲ್ಲ.
ಇದರಿಂದ ಮೈತ್ರಿ ಕೂಟ ಸರ್ಕಾರದಿಂದ ನಿರ್ಗಮಿಸುತ್ತಿರುವುದಾಗಿ ಗ್ರೀನ್ಸ್ ಪಕ್ಷ ಘೋಷಿಸಿತು. ಇದರೊಂದಿಗೆ ಮ್ಯಾಗ್ಡಲೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ರಾಜೀನಾಮೆ ಪತ್ರವನ್ನು ಸಂಸತ್ತಿನ ಸ್ಪೀಕರ್‌ಗೆ ಕಳುಹಿಸಿದ್ದಾರೆ.
ಸ್ವೀಡನ್ ಸಂಸತ್ತು 349 ಸದಸ್ಯರನ್ನು ಹೊಂದಿದೆ. ಇವರಲ್ಲಿ 117 ಮಂದಿ ಮ್ಯಾಗ್ಡಲೀನಾ ಪರವಾಗಿ, 174 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದರು. 57 ಮಂದಿ ಮತದಾನದಿಂದ ದೂರ ಉಳಿದು. ಒಬ್ಬರು ಗೈರುಹಾಜರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ