ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲಿರುವ ಕೆನಡಾ

ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಸಮುದಾಯದ ಮಂದಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೆನಡಾ ಮುಂದಾಗಿದೆ. 
ಕೆನಡಾ ಧ್ವಜ (ಸಂಗ್ರಹ ಚಿತ್ರ)
ಕೆನಡಾ ಧ್ವಜ (ಸಂಗ್ರಹ ಚಿತ್ರ)

ಟೊರಂಟೋ: ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಸಮುದಾಯದ ಮಂದಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೆನಡಾ ಮುಂದಾಗಿದೆ. 

ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳು, ಅದರ ರಾಜಧಾನಿ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಕಾಬೂಲ್ ನತ್ತ ಮುನ್ನುಗ್ಗುತ್ತಿದ್ದಾರೆ. 

ಗುರುವಾರ, ಶುಕ್ರವಾರಗಳಂದು ತಾಲಿಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದ ಪ್ರಮುಖ ನಗರಗಳಾದ ಹೆರಾತ್ ಹಾಗೂ ಕಂದಹಾರ್ ನಗರಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ದೇಶದ ಮೂರನೇ ಎರಡರಷ್ಟು ಪ್ರಾಂತ್ಯಗಳು ಹಾಗೂ 34 ಪ್ರಾಂತೀಯ ರಾಜಧಾನಿಗಳ ಪೈಕಿ ಬಹುತೇಕ ಪ್ರದೇಶಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. 

"ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಹಾಗೂ ದುರ್ಬಲ ಆಫ್ಘನ್ನರ ಮೇಲೆ ಅದು ಒಡ್ಡುತ್ತಿರುವ ಅಪಾಯಗಳ ಬಗ್ಗೆ ಕೆನಡಾ ತೀವ್ರವಾಗಿ ಆತಂಕಗೊಂಡಿದೆ. ತಾಲೀಬಾನ್ ಆಫ್ಘಾನಿಸ್ತಾನವನ್ನು ಆವರಿಸುತ್ತಿರುವುದರ ಪರಿಣಾಮ ಆಫ್ಘನ್ನರ ಜೀವ-ಜೀವನಗಳಿಗೆ ಅಪಾಯ ಎದುರಾಗುತ್ತಿದೆ ತತ್ಪರಿಣಾಮ ಹಲವು ಮಂದಿ ದೇಶ ತೊರೆಯುತ್ತಿದ್ದಾರೆ" ಎಂದು ಕೆನಡಾದ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ವಲಸೆ ನೀತಿ, ನಿರಾಶ್ರಿತ, ಪೌರತ್ವ ಸಚಿವ ಮಾರ್ಕೊ ಇ ಎಲ್ ಮೆಂಡಿಸಿನೊ, ರಾಷ್ಟ್ರೀಯ ರಕ್ಷಣಾ ಸಚಿವ ಹರ್ಜಿತ್ ಎಸ್ ಸಜ್ಜನ್ ಮತ್ತು ವಿದೇಶಾಂಗ ಸಚಿವ ಮಾರ್ಕ್ ಗರ್ನೌ ಜಂಟಿಯಾಗಿ ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಕೆನಡಾ ಸರ್ಕಾರದ ಈ ನಿರ್ಧಾರವನ್ನು ಕೈಗೊಂಡಿದ್ದು ಘೋಷಿಸಿದ್ದಾರೆ. 

ಆಫ್ಘಾನಿಸ್ತಾನದಲ್ಲಿ ಕೆನಡಾದ ಪ್ರಯತ್ನಗಳಿಗೆ ಕೊಡುಗೆ ನೀಡಿದ ಆಫ್ಘನ್ನರಿಗೆ ವಿಶೇಷ ವಲಸೆ ಯೋಜನೆಯನ್ನು ಕೆನಡಾ ಸರ್ಕಾರ ಜಾರಿಗೊಳಿಸಲಿದೆ, ಜೊತೆಗೆ ಸರ್ಕಾರ ದುರ್ಬಲ ವರ್ಗಗಳಿಗಾಗಿಯೇ ಪ್ರತ್ಯೇಕ ಯೋಜನೆಯನ್ನು ಪರಿಚಯಿಸಲಿದೆ. 

ಕೆನಡಾದ ಮಂದಿ ಆಫ್ಘಾನಿಸ್ತಾನದಲ್ಲಿರುವ ಪರಿಸ್ಥಿತಿಯ ಬಗ್ಗೆ ಆತಂಕಗೊಂಡಿದ್ದಾರೆ. ದುರ್ಬಲ ಅಫ್ಘನ್ನರಿಗೆ ಅಗತ್ಯವಿರುವ ಸಮಯದಲ್ಲಿ ಕೆನಡಾ ಬೆಂಬಲಕ್ಕೆ ನಿಲ್ಲಲಿದೆ ಎಂದು ಜಗತ್ತಿನಾದ್ಯಂತ ಇರುವ ಮಂದಿಗೆ ತಿಳಿದಿದೆ  ಮಹಿಳಾ ನಾಯಕರು, ಮಾನವ ಹಕ್ಕುಗಳ ಸಮರ್ಥಕರು, ಪತ್ರಕರ್ತರು, ಧಾರ್ಮಿಕ ಅಲ್ಪಸಂಖ್ಯಾತರು, ಎಲ್ ಜಿಬಿಟಿಐ ವ್ಯಕ್ತಿಗಳು ಸೇರಿದಂತೆ ಹಲವು ದುರ್ಬಲ ವರ್ಗಗಳ ಮಂದಿ ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದ್ದು, ಕೆನಡಾದಲ್ಲಿ ಸುರಕ್ಷಿತವಾಗಿರಲಿದ್ದಾರೆ. ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ ಎಂದು ಭಾರತೀಯ ಮೂಲದ ಸಚಿವ ಸಜ್ಜನ್ ಹೇಳಿದ್ದಾರೆ. 
 
ಈ ಹಿಂದೆ ಕಿರುಕುಳಕ್ಕೆ ಒಳಗಾದ ಆಫ್ಘಾನಿಸ್ತಾನದ ಸಿಖ್, ಹಿಂದೂಗಳಿಗೆ ದೇಶದಲ್ಲಿ ಆಶ್ರಯ ನೀಡಿದ್ದ ಮನ್ಮೀತ್ ಸಿಂಗ್ ಭುಲ್ಲರ್ ಫೌಂಡೇಶನ್ ನ ಸಹಾಯವನ್ನು ಸರ್ಕಾರ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಅಮೆರಿಕ ಹಾಗೂ ನ್ಯಾಟೋ ಪಡೆಗಳು ಆಫ್ಘಾನಿಸ್ತಾನದಿಂದ ಹೊರನಡೆಯುತ್ತಿರುವ ಪರಿಣಾಮವಾಗಿ ತಾಲೀಬಾನ್ ಸುಲಭವಾಗಿ ಆಫ್ಘಾನಿಸ್ತಾನದ ಪ್ರದೇಶಗಳನ್ನು ಆವರಿಸಿಕೊಳ್ಳುತ್ತಿವೆ. ಆ.31 ರ ವೇಳೆಗೆ ವಿದೇಶಿ ಪಡೆಗಳು ವಾಪಸ್ ತೆರಳಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com