ವಿಮಾನ ಏರಲು ನೂಕು ನುಗ್ಗಲು: ತಾಲಿಬಾನ್ ಗೆ ಬೆದರಿ ತಾಯ್ನಾಡು ತೊರೆಯಲು ಶ್ರೀಮಂತ ಆಫ್ಘನ್ನರ ಶತ ಪ್ರಯತ್ನ
ಕಾಬೂಲ್: ಯುದ್ಧಗ್ರಸ್ತ ಅಫ್ಘಾನಿಸ್ತಾನ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ತಾಲಿಬಾನ್ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಇನ್ನೊಂದೆಡೆ ಸಾವಿರಾರು ಮಂದಿ ನಾಗರಿಕರು ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿರುವ ಬೆಳವಣಿಗೆ ನಡೆದಿದೆ.
ಬಸ್ಸು ರೈಲುಗಳನ್ನು ಏರಲು ಜನಸಾಮಾನ್ಯರು ಕರ್ಚೀಫು, ಟವೆಲ್ಲುಗಳನ್ನು ಹಿಡಿದು ಗುಂಪುಗಟ್ಟಿ ಅದರ ಹಿಂದೆ ಓಡುವಂತೆ ವಿಮಾನ ಏರಲು ಶ್ರೀಮಂತ ಆಫ್ಘನ್ನರು ಮುಗಿಬಿದ್ದಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾಗರೋಪಾದಿಯಲ್ಲಿ ಜನ ಸಮೂಹ ನೆರೆದು ದೇಶ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ವಿಮಾನ ನಿಲ್ದಾಣ ಬಸ್ ನಿಲ್ದಾಣವನ್ನು ನೆನಪಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಮಾನ ಏರಲು ಹಾಕುವ ಮೆಟ್ಟಿಲುಗಳನ್ನು ಸರದಿ ಪ್ರಕಾರ ಏರುವ ತಾಳ್ಮೆ ಇಲ್ಲದೆ ನೆಲದಿಂದಲೇ ಮಂಗಗಳಂತೆ ಮೇಲಕ್ಕೆ ಹಾರಿ, ಜನರನ್ನು ತಳ್ಳಾಡಿ ನುಗ್ಗುತ್ತಿರುವ ದೃಶ್ಯ ಕಂಡು ಇಂಟರ್ನೆಟ್ ಬಳಕೆದಾರರು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದಕ್ಕೂ ಮುನ್ನ ವಿಮಾನ ನಿಲ್ದಾಣಕ್ಕೆ ಹರಿದು ಬಂದ ಜನಸಮೂಹವನ್ನು ನಿಯಂತ್ರಿಸಲು ಅಮೆರಿಕ ತನ್ನ ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಪರಿಸ್ಥಿತಿ ನಿಯಂತ್ರಣ ಮೀರಿದಾಗ ಅವರು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆಯೂ ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ