ಕಾಬೂಲಿನಿಂದ ಹೊರಟ ಕಡೆಯ ವಿಮಾನದಲ್ಲಿ ಭಾರತಕ್ಕೆ ಮರಳಿದ ಪತ್ರಕರ್ತೆಯ ರೋಚಕ ಕಥೆ

ಭಾರತದಿಂದ ಆಫ್ಘನ್ನರು ಹೆಚ್ಚಿನ ಸಹಾಯವನ್ನು ನಿರೀಕ್ಷಿಸಿದ್ದರು. ಅದು ಹುಸಿಯಾಯಿತು. ಈಗ ತಮ್ಮ ಕಷ್ಟಕ್ಕೆ ನೆರವಾಗದ ಹಿರಿಯಣ್ಣನ ಕಂಡಂತೆ ಅವರು ಭಾರತವನ್ನು ಕಾಣುತ್ತಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಾಬೂಲಿನಿಂದ ಅಂತಿಮ ಕ್ಷಣದಲ್ಲಿ ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ್ದರು ಪತ್ರಕರ್ತೆ ಕನಿಕಾ ಗುಪ್ತಾ. ಕಳೆದ ಎರಡು ದಿನಗಳ ಅವಧಿಯಲ್ಲಿ ತಾವು ಕಂಡ ಅಜಗಜಾಂತರ ಬದಲಾವಣೆಯ ವೃತ್ತಾಂತವನ್ನು ಅವರು ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಮಂದಿ ಭಾರತದ ಬಗೆಗೆ ಇರಿಸಿಕೊಂಡಿರುವ ಪ್ರೀತಿ ಮತ್ತು ವಿಶಾವಸದ ಕುರಿತು ಅವರು ಮಾತನಾಡಿದ್ದಾರೆ. ಆಪತ್ಕಾಲದಲ್ಲಿ ಭಾರತ ತಮ್ಮ ನೆರವಿಗೆ ಬಂದೇ ಬರುತ್ತದೆ ಎಂದು ನಂಬಿಕೊಂಡಿದ್ದರು ಎಂಬುದಾಗಿ ಅವರು ಹೇಳಿದ್ದಾರೆ. ಓವರ್ ಟು ಕನಿಕಾ ಗುಪ್ತಾ...

ತಾಲಿಬಾನಿಗಳು ನನಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದ ತಕ್ಷಣ ನಾನು ಆಲ್ಲಿಂದ ಗಂಟುಮೂಟೆ ಕಟ್ಟಿ ಹೊರಡಲನುವಾದೆ. ಆಗಿನ್ನೂ ತಾಲಿಬಾನಿಗಳು ಸರ್ಕಾರ ನಡೆಸುವುದು ಖಚಿತವಾಗಿರಲಿಲ್ಲ. ಈ ಸಂದರ್ಭದಲ್ಲಿ ನಾನು ಕಾಬೂಲಿನ ಭಾರತೀಯ ದೂತವಾಸ ಕಚೇರಿಯನ್ನು ಸಂಪರ್ಕಿಸಿದೆ. ಅವರು ಹೇಗಾದರೂ ಮಾಡಿ ದೂತವಾಸ ಕಚೇರಿಗೆ ಬಂದುಬಿಡಿ, ನಂತರ ಭಾರತಕ್ಕೆ ಕಳುಹಿಸುವ ವ್ಯವಸ್ಥೆಯನ್ನು ತಾವು ಮಾಡುವುದಾಗಿ ಭರವಸೆ ನೀಡಿದರು. ನನಗೇ ಅದೇ ದೊಡ್ಡ ತಲೆನೋವಾಯಿತು. ನಗರದಲ್ಲಿ ಎಲ್ಲೆಲ್ಲಿ ತಾಲಿಬಾನಿಗಳು ಬೀಡು ಬಿಟ್ಟಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ. ಮಾರ್ಗ ಮಧ್ಯ ಎಲ್ಲಿ ನನ್ನನ್ನು ಹಿಡಿದು ಬಿಡುವರೋ ಎನ್ನುವ ಆತಂಕ ಕಾಡಿತು. 

ಧೈರ್ಯ ಮಾಡಿ ಕಾರು ಬುಕ್ ಮಾಡಿ ಹೊರಟೆ. ಅಷ್ಟರಲ್ಲಿ ಏನು ಆಗಬಾರದು ಎಂದುಕೊಂಡಿದ್ದೆನೋ ಅದಾಯಿತು. ಮುಂದುಗಡೆ ಚೆಕ್ ಪೋಸ್ಟಿನಲ್ಲಿ ತಾಲಿಬಾನಿಗಳು ನಿಂತಿದ್ದರು. ಹೋಗುವ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ನಮ್ಮ ವಾಹನವನ್ನು ಕಂಡು ತಡೆಹಿಡಿದರು. ಮುಂದಕ್ಕೆ ಹೋಗಲು ಬಿಡಲಿಲ್ಲ. ಅವರೊಡನೆ ನಾನು ಮಾತನಾಡುತ್ತಿದ್ದರೂ ನನ್ನೆಡೆ ಅವರು ಕಣ್ಣೆತ್ತಿಯೂ ನೋಡದೆ ನನ್ನ ಡ್ರೈವರ್ ಬಳಿಯೇ ಮಾತುಕತೆ ನಡೆಸುತ್ತಿದ್ದರು. ನಾನೊಬ್ಬಳು ಹೆಣ್ಣು ಎನ್ನುವ ಕಾರಣಕ್ಕೆ ಅವರು ನನ್ನತ್ತ ತಿರುಗಿ ನೋಡುತ್ತಿಲ್ಲ ಎಂದು ತಡವಾಗಿ ಅರಿವಾಯಿತು. 2 ಗಂಟೆಗಳ ಕಾಲ ಅವರು ನಮ್ಮನ್ನು ಸತಾಯಿಸಿದರು. ನಂತರ ತಾಲಿಬಾನಿಗಳೇ ನನ್ನನ್ನು ಭಾರತೀಯ ದೂತವಾಸ ಕಚೇರಿ ತನಕ ಬೀಳ್ಕೊಟ್ಟರು. 

ಭಾರತೀಯ ದೂತವಾಸ ಕಚೇರಿಯ ಹೊರಗೆ ಸಾವಿರಾರು ಮಂದಿ ಗೇಟಿನ ಬಳಿ ಜಮಾಯಿಸಿದ್ದರು. ನನ್ನ ಜೊತೆಯಿದ್ದ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿ ನನ್ನನ್ನು ದೂತವಾಸ ಕಚೇರಿ ಒಳಕ್ಕೆ ಬಿಟ್ಟು ಹೋದರು. ನಂತರ ನನ್ನ ವಿಮಾನ ಪ್ರಯಾಣದ ಏರ್ಪಾಡಾಯಿತು. ರಾತ್ರಿ 10 ಗಂಟೆಯ ಹೊತ್ತಿನಲ್ಲಿ ಅಫ್ಘಾನಿಸ್ತಾನ ವಿಮಾನ ನಿಲ್ದಾಣಕ್ಕೆ ಬಂದೆ. 

ಅಲ್ಲಿ ಜನ ಸಾಗರವೇ ನೆರೆದಿತ್ತು. ಮಕ್ಕಳ ಚಪ್ಪಲಿಗಳು, ಮಹಿಳೆಯರ ದುಪ್ಪಟ್ಟಾಗಳು, ಶಾಲುಗಳು ನೆಲದ ಮೇಲೆಲ್ಲಾ ಹರಡಿಕೊಂಡಿದ್ದವು. ಕೆಲ ಕ್ಷಣಗಳ ಹಿಂದೆ ನಡೆದಿದ್ದ ನೂಕುನುಗ್ಗಲಿಗೆ ಅವು ಸಾಕ್ಷಿ ನುಡಿಯುತ್ತಿತ್ತು. ನಾನು ಕಾಬೂಲಿನಲ್ಲಿ ಕಳೆದ ಕಡೆಯ 2 ದಿನಗಳು ನಾನು ಹಿಂದೆಂದೂ ಕಂಡರಿಯದ ಕಾಬೂಲಿನ ದರುಶನ ಮಾಡಿಸಿತು. ಬ್ಯೂಟಿ ಪಾರ್ಲರ್ ಗಳಿಗೆ ಕಪ್ಪು ಪೇಂಟ್ ಬಳಿಯಲಾಗಿತ್ತು. ಕಾಬೂಲ್ ಬೀದಿಗಳಲ್ಲಿ ಮಹಿಳೆಯರು ಮಕ್ಕಳು ಯಾರೊಬ್ಬರೂ ಓಡಾಡುತ್ತಿರಲಿಲ್ಲ. ಕಾಬೂಲ್ ತುಂಬಾ ಫ್ಯಾಷನೇಬಲ್ ನಗರಿ. ಅಲ್ಲಿನ ಮಹಿಳೆಯರು ರೂಪವತಿಯರು. ಅವರೊಡನೆ ಮಾತನಾಡುವುದೇ ಸಂತಸದ ಸಂಗತಿಯಾಗಿತ್ತು. ಆದರೆ ಕಡೆಯ 2 ದಿನಗಳಲ್ಲಿ ಎಲ್ಲವೂ ಬದಲಾಗಿತ್ತು.

ನಗರದ ಯಾವುದೇ ವ್ಯಕ್ತಿಯನ್ನು ಮಾತನಾಡಿಸಿ ನೋಡಿ ಅವರೆಲ್ಲರಲ್ಲಿ ಭಾರತದ ಬಗೆಗಿನ ಪ್ರೀತಿ ಕಾಣಿಸುತ್ತದೆ. ಅಂತೆಯೇ ಪಾಕ್ ಕುರಿತ ಸಿಟ್ಟು ಕೂಡಾ. ಅಫ್ಘಾನಿಸ್ತಾನಿಯರೂ ನಮ್ಮವರೇ ಎಂದು ಕರೆದುಕೊಳ್ಳುವ ಮಟ್ಟಿಗೆ ನಾವು ಭಾರತೀಯರಿಗೆ ಆಪ್ತರಾಗಿಬಿಡುತ್ತಾರೆ ಅಲ್ಲಿನವರು. ನಮ್ಮಂತೆಯೇ ಅವರೂ ಬಾಲಿವುಡ್ ಕುರಿತು ಅತೀವ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಭಾರತದ ಜೊತೆ ಸಹೋದರ ಮನೋಭಾವವನ್ನು ಬೆಳೆಸಿಕೊಂಡಿದ್ದ ಅಫ್ಘಾನಿಸ್ತಾನದಲ್ಲಿ ಈಗ ಎಲ್ಲರೂ ವಂಚನೆಗೊಳಗಾದ ಅನುಭವವನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಾರತ ದೂತವಾಸ ಕಚೇರಿಯ 45 ಮಂದಿ ಸಿಬ್ಬಂದಿ ಭಾರತೀಯ ವಾಯುಪಡೆಯ c-17 ವಿಮಾನದಲ್ಲಿ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದರು. ಅದೇ ವಿಮಾನದಲ್ಲಿ ನಾನೂ ಇದ್ದೆ. ಈಗಲೂ ಅಲ್ಲಿಯೇ ಉಳಿದುಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕುರಿತಾಗಿ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ. ನಮ್ಮವರನ್ನೇನೋ ರಕ್ಷಿಸಬಹುದು ಆದರೆ ಅಲ್ಲಿಯೇ ಉಳಿದವರ ಪಾಡು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com