ಐಸಿಸ್-ಕೆ ಅಥವಾ ಐಸಿಸ್-ಖೋರಾಸನ್‌ ಉಗ್ರರು ಎಂದರೆ ಯಾರು?

ಕಾಬೂಲ್ ವಿಮಾನ ನಿಲ್ದಾಣದಲ್ಲಿ ರಕ್ತದೋಕುಳಿ ನಡೆಸಿದ ಐಸಿಸ್‌-ಕೆ ಸಂಘಟನೆ ಅಫ್ಘಾನಿಸ್ತಾನದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ನೋಡುತ್ತಿದೆ. ಅತ್ತ ಅಮೆರಿಕಾ, ಇತ್ತ ತಾಲಿಬಾನಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಲು ಈ ಕೃತ್ಯ ಎಸಗಿದೆ.
ಐಸಿಸ್-ಖೋರಾಸನ್
ಐಸಿಸ್-ಖೋರಾಸನ್

ವಾಷಿಂಗ್ಟನ್‌: ಕಾಬೂಲ್ ವಿಮಾನ ನಿಲ್ದಾಣದಲ್ಲಿ ರಕ್ತದೋಕುಳಿ ನಡೆಸಿದ ಐಸಿಸ್‌-ಕೆ ಸಂಘಟನೆ ಅಫ್ಘಾನಿಸ್ತಾನದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ನೋಡುತ್ತಿದೆ. ಅತ್ತ ಅಮೆರಿಕಾ, ಇತ್ತ ತಾಲಿಬಾನಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಲು ಈ ಕೃತ್ಯ ಎಸಗಿದೆ. ತಾಲಿಬಾನಿಗಳೊಂದಿಗೆ ಈಗಾಗಲೇ ಆಧಿಪತ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಈ ಭಯೋತ್ಪಾದಕ ಸಂಘಟನನೆ ಸರಣಿ ಸ್ಫೋಟಗಳ ಮೂಲಕ ಅಮೆರಿಕಾಗೆ ಸವಾಲಾಗಿ ಮಾರ್ಪಟ್ಟಿದೆ. ಅಷ್ಟಕ್ಕೂ ಯಾವುದಿರು ಭಯೋತ್ಪಾದಕ ಸಂಘಟನೆ ? ಇದು ಹೇಗೆ ಅರಾಜಕತೆ ನಡೆಸುತ್ತಿದೆ?

ಐಸಿಸ್-ಕೆ ಎಂದರೇನು?
ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಸಂಘಟನೆಯಲ್ಲಿ ತನ್ನ ಕಾರ್ಯ ಮುಂದುವರಿಸಿ ಕಠೋರ ಸಿದ್ಧಾಂತ ಹೊಂದಿರುವ ಕೆಲವು ಭಯೋತ್ಪಾದಕರು 2014 ರಲ್ಲಿ ಒಂದು ಗುಂಪು ರಚಿಸಿಕೊಂಡರು. ಪಾಕಿಸ್ತಾನದ ತಾಲಿಬಾನ್ ಹೋರಾಟಗಾರರು ಆರಂಭದಲ್ಲಿ ಈ ಗುಂಪನ್ನು ಸೇರಿಕೊಂಡರು. ಪೂರ್ವ ಅಫ್ಘಾನಿಸ್ತಾನದಲ್ಲಿ ಅವರ ಚಟುವಟಿಕೆಗಳು ಮೊದಲು ಕಂಡುಬಂದವು. ಈಗ ಅಫ್ಘಾನಿಸ್ತಾನ, ಇರಾನ್, ಪಾಕಿಸ್ತಾನ ಹಾಗೂ ತುರ್ಕಮೆನಿಸ್ತಾನದ ಭಾಗವಾಗಿರುವ ಒಂದು ಪ್ರದೇಶವನ್ನು ಖೋರಾಸನ್ ಎಂದು ಕರೆಯಲಾಗುತ್ತದೆ. ಅವರ ಪ್ರಧಾನ ಕಛೇರಿ ಈ ಪ್ರದೇಶದಲ್ಲಿದೆ. ಪಾಕಿಸ್ತಾನಕ್ಕೆ ಮಾದಕ ದ್ರವ್ಯಗಳು, ಅಕ್ರಮ ಮಾನವ ಕಳ್ಳಸಾಗಣೆ ಮಾಡಲು ಇದು ಮಾರ್ಗವಾಗಿದೆ. ಈ ಪ್ರದೇಶದ ಗುರುತಾಗಿ ಇವರನ್ನು ಐಸಿಸ್-ಕೆ ಅಥವಾ ಐಎಸ್-ಕೆ ಎಂದು ಕರೆಯಲಾಗುತ್ತದೆ. ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವುದೇ ಅವರ ಗುರಿಯಾಗಿದೆ.

ಅರಾಜಕತಾವಾದಿಗಳು..:
ತಾಲಿಬಾನ್ ಗಳು ಅಫ್ಘಾನಿಸ್ತಾನಕ್ಕೆ ಸೀಮಿತವಾಗಿದ್ದರೆ ಐಸಿಸ್-ಕೆ ವಿಶ್ವದಾದ್ಯಂತ ಮುಸ್ಲಿಮೇತರರ ವಿರುದ್ಧ ಜಿಹಾದ್ ಗೆ ಕರೆ ನೀಡಿದೆ. ಅಮೆರಿಕಾದ ವಾಷಿಂಗ್ಟನ್, ಡಿಸಿ ಯಲ್ಲಿರುವ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ಪ್ರಕಾರ ಐಸಿಸ್‌ - ಕೆ ನಲ್ಲಿ 2017-18ರಲ್ಲೇ ಅಫ್ಘಾನಿಸ್ತಾನ ಪಾಕಿಸ್ತಾನದಲ್ಲಿ ಸಾಮಾನ್ಯ ಜನರನ್ನು ಗುರಿಯಾಗಿಸಿ 100 ಕ್ಕೂ ಹೆಚ್ಚು ನಾಗರಿಕರ ಮೇಲೆ ದಾಳಿ ನಡೆಸಿದೆ ಎಂದು ಅಂದಾಜಿಸಿದೆ. ಇದು ಅಮೆರಿಕಾ -ಅಫ್ಘನ್, ಪಾಕಿಸ್ತಾನ ಪಡೆಗಳ ಮೇಲೆ 250 ದಾಳಿಗಳನ್ನು ನಡೆಸಿದೆ. 2020 ರ ಕಾಬೂಲ್ ವಿಮಾನ ನಿಲ್ದಾಣ, ಕಾಬೂಲ್ ವಿಶ್ವವಿದ್ಯಾಲಯ ಹಾಗೂ ಅಧ್ಯಕ್ಷರ ಭವನದ ಮೇಲಿನ ರಾಕೆಟ್ ದಾಳಿಯಲ್ಲಿ ಇವರ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಇವುಗಳಲ್ಲದೆ, ಬಾಲಕಿಯರ ಶಾಲೆಗಳು, ಆಸ್ಪತ್ರೆಗಳ ಹೆರಿಗೆ ವಾರ್ಡ್‌ಗಳ ಮೇಲೆ ದಾಳಿ ನಡೆಸಿ, ಗರ್ಭಿಣಿಯರು ಹಾಗೂ ದಾದಿಯರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ನಡೆಸಿದ್ದಾರೆ. ಶಿಯಾ ಮುಸ್ಲಿಮರ ಮೇಲೆ ಹೆಚ್ಚು ದಾಳಿ ನಡೆಸಿದ್ದಾರೆ.

ಇನ್ನೂ ಎಂತಹ ಅಪಾಯಗಳಿವೆಯೋ?
ತಾಲಿಬಾನ್ ದೌರ್ಜನ್ಯಗಳು ಅಸಹನೀಯವಾಗಿದ್ದರೆ, ISIS-K ಮತ್ತಷ್ಟು ಕಠೋರವಾಗಿ ವರ್ತಿಸುತ್ತಿದೆ. ಶರಿಯಾ ಕಾನೂನನ್ನು ಸಂಪೂರ್ಣವಾಗಿ ಬದಲಾಯಿಸಿ, ತನ್ನದೇ ಆದ ನಿಯಮಗಳನ್ನು ಆಫ್ಘನ್ ಜನರ ಮೇಲೆ ಹೇರಲು ನೋಡುತ್ತಿದೆ. ತಾಲಿಬಾನಿಗಳು ಕಠಿಣವಾಗಿಲ್ಲ ಎಂಬುದು ಅವರ ಗ್ರಹಿಕೆಯಾಗಿದೆ. ತಾಲಿಬಾನ್, ಐಸಿಸ್-ಕೆ ನಡುವೆ ಆಧಿಪತ್ಯಕ್ಕಾಗಿ ಹೋರಾಟ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಅಮೆರಿಕದೊಂದಿಗೆ ತಾಲಿಬಾನ್‌ಗಳು ಶಾಂತಿ ಮಾತುಕತೆಗೆ ಹೋಗುವುದನ್ನು ಈ ಸಂಸ್ಥೆ ಇಷ್ಟಪಡುವುದಿಲ್ಲ. ಶಾಂತಿ ಒಪ್ಪಂದಗಳಿಂದ ಜಿಹಾದ್‌ನ ಗುರಿಗಳನ್ನು ಸಾಧಿಸಲು ಆಗದು ಎಂಬುದನ್ನು ಬಲವಾಗಿ ನಂಬುತ್ತಾರೆ.

ಹಕ್ಕಾನಿ ನೆಟ್ವರ್ಕ್ ಬೆಂಬಲ:
ತಾಲಿಬಾನ್ ನೊಂದಿಗೆ ಐಸಿಸ್‌-ಕೆ ಯಾವುದೇ ರೀತಿಯಲ್ಲೂ ಸರಿಹೊಂದುವುದಿಲ್ಲ. ಆದರೆ ತಾಲಬಾನಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಹಕ್ಕಾನಿ ನೆಟ್ ವರ್ಕ್ ನೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಐಸಿಸ್-ಕೆ, ಹಕ್ಕಾನಿ ನೆಟ್ವರ್ಕ್, ಪಾಕಿಸ್ತಾನ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿರುವ ಇತರ ಸಂಘಟನೆಗಳು ಹಲವು ಜಂಟಿ ದಾಳಿಗಳಲ್ಲಿ ಭಾಗಿಯಾಗಿವೆ. ಆಗಸ್ಟ್ 15 ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಜೈಲಿನಲ್ಲಿದ್ದ ಅನೇಕರನ್ನು ಬಿಡುಗಡೆ ಮಾಡಲಾಯಿತು. ಅವರಲ್ಲಿ ಐಎಸ್ ಹಾಗೂ ಅಲ್ ಖೈದಾ ಭಯೋತ್ಪಾದಕರು ಐಸಿಸ್ ಜೊತೆ ಕೈಜೋಡಿಸಿದ್ದಾರೆ. ಹಕ್ಕಾನಿ ನೆಟ್ ವರ್ಕ್ ನ ಸದಸ್ಯರು ಸಂಸ್ಥೆಗೆ ತಾಂತ್ರಿಕ ನೆರವು ನೀಡುತ್ತಿದ್ದಾರೆ ಎಂಬ ಶಂಕೆಯಿದೆ.

ಎಷ್ಟು ಪ್ರಬಲ?
2014 ರಲ್ಲಿ ಆರಂಭವಾದ ಈ ಸಂಸ್ಥೆ 2016 ರ ವೇಳೆಗೆ ಅತ್ಯಂತ ಪ್ರಬಲವಾಗಿ ಬೆಳೆದಿದೆ. ಆ ಸಮಯದಲ್ಲಿ, ಸಂಸ್ಥೆ 3,000 ರಿಂದ 8,500 ಭಯೋತ್ಪಾದಕರನ್ನು ಹೊಂದಿತ್ತು. ಆದರೆ ಅಮೆರಿಕಾ, ಅಫ್ಘಾನ್ ಪಡೆಗಳೊಂದಿಗೆ ತಾಲಿಬಾನ್ ದಾಳಿಯಲ್ಲಿ ಅನೇಕರು ಸಾವನ್ನಪ್ಪಿದರು. 2019 ರ ವೇಳೆಗೆ ಈ ಸಂಸ್ಥೆಯ ಸದಸ್ಯರ ಸಂಖ್ಯೆ 2,000-4,000 ಕ್ಕೆ ಇಳಿದಿದೆ. ಈ ಸಂಸ್ಥೆ ಭಾರತದ ಕೇರಳದಲ್ಲಿ 100 ಕ್ಕೂ ಹೆಚ್ಚು ಯುವಕರನ್ನು ಸೆಳೆದುಕೊಂಡಿದೆ. ಗೆರಿಲ್ಲಾ ಯುದ್ಧದಲ್ಲಿ ಈ ಸಂಸ್ಥೆಯ ಭಯೋತ್ಪಾದಕರ ಅತ್ಯಂತ ನೈಪುಣ್ಯ ಹೊಂದಿದ್ದಾರೆ. ಪದೇ ಪದೇ ಆತ್ಮಾಹುತಿ ದಾಳಿಗೆ ಮುಂದಾಗುತ್ತಾರೆ. ಈ ಸಂಸ್ಥೆ ಆರಂಭವಾದಾಗ ಪಾಕಿಸ್ತಾನದ ತಾಲಿಬಾನ್ ಮುಖ್ಯಸ್ಥ ಹಫೀಜ್ ಸಯೀದ್ ಖಾನ್ ಸಂಘಟನೆಯ ಮುಖ್ಯಸ್ಥನಾಗಿದ್ದ, ಆತನ ಉಪನಾಯಕ ಅದುಲ್ ರಾಫ್ ಅಲಿಜಾ ಅಮೆರಿಕದ ದಾಳಿಯಲ್ಲಿ ಹತನಾದ ಪ್ರಸ್ತುತ ಶಹಾಬ್ ಅಲ್-ಮುಜಿರ್ ಸಂಸ್ಥೆಯ ಮುಖ್ಯಸ್ಥನಾಗಿದ್ದಾನೆ ಆತ ಸಿರಿಯಾದವನು ಎಂದು ಭಾವಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com