ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಡೊಮಿನಿಕಾ ಹೈಕೋರ್ಟ್ ಜಾಮೀನು ನಿರಾಕರಣೆ

ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಡೊಮಿನಿಕಾದ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಡೊಮಿನಿಕಾದ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

2018ರಿಂದ ಆಂಟಿಗುವಾ ಮತ್ತು ಬರ್ಬುಡಾದಲ್ಲಿ ಮೆಹುಲ್ ಚೋಕ್ಸಿ ನಾಗರಿಕನಾಗಿ ವಾಸಿಸುತ್ತಿದ್ದರು.ಅಲ್ಲಿಂದ ರಹಸ್ಯವಾಗಿ ಕಣ್ಮರೆಯಾಗಿ ದ್ವೀಪರಾಷ್ಟ್ರ ಡೊಮಿನಿಕಾಗೆ ಪ್ರವೇಶ ಪಡೆದಿದ್ದರು. ಈ ಸಂಬಂಧ ಕೇಸು ವಿಚಾರಣೆ ನಡೆಸುತ್ತಿರುವ ಡೊಮಿನಿಕಾ ಹೈಕೋರ್ಟ್ ಜಾಮೀನು ನಿರಾಕರಿಸಿದೆ. 

ಅಲ್ಲಿನ ಸ್ಥಳೀಯ ಕಾಲಮಾನ ನಿನ್ನೆ ತೀರ್ಪು ನೀಡಿದ ನ್ಯಾಯಾಲಯ ಜಾಮೀನು ನೀಡಿದರೆ ಅಪಾಯವಿದೆ ಎಂದು ಮನಗಂಡು ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ನಿರಾಕರಿಸಿದ ಹಿನ್ನೆಲೆಯಲ್ಲಿ ಚೋಕ್ಸಿ ಹೈಕೋರ್ಟ್ ಮೊರೆ ಹೋಗಿದ್ದರು.

ಭಾರತದಲ್ಲಿ ಗೀತಾಂಜಲಿ ಜೆಮ್ಸ್ ಮತ್ತು ಇತರ ಖ್ಯಾತ ವಜ್ರೋದ್ಯಮ ಬ್ರಾಂಡ್ ಗಳ ಪ್ರವರ್ತಕನಾಗಿರುವ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರದ 500 ಕೋಟಿ ರೂಪಾಯಿ ವಂಚನೆಯೆಸಗಿ ಪರಾರಿಯಾಗಿದ್ದರು, ಈ ವಂಚನೆ ಪ್ರಕರಣದಲ್ಲಿ ಅವರ ಸಂಬಂಧಿ ನೀರವ್ ಮೋದಿಯ ಹೆಸರು ಕೂಡ ಕೇಳಿಬರುತ್ತಿದೆ.

62 ವರ್ಷದ ಚೋಕ್ಸಿ ವಿರುದ್ಧ ಈಗಾಗಲೇ ಆಂಟಿಗುವಾ ಮತ್ತು ಬರ್ಬುಡಾ ದೇಶಗಳು ಇಂಟರ್ ಪೋಲ್ ರೆಡ್ ನೋಟಿಸ್ ಕಳುಹಿಸಿವೆ. ಭಾರತದಿಂದ ಪರಾರಿಯಾದ ನಂತರ ಮೆಹುಲ್ ಚೋಕ್ಸಿ 2018ರಿಂದ ಈ ದೇಶಗಳಲ್ಲಿ ವಾಸಿಸುತ್ತಿದ್ದರು.

ಅಲ್ಲಿಂದ ತನ್ನ ಪ್ರೇಯಸಿ ಜೊತೆ ರಹಸ್ಯವಾಗಿ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಪೊಲೀಸರು ಬಂಧಿಸಿದ್ದರು. 

ಪರಾರಿಯಲ್ಲ, ಅಪಹರಿಸಿದ್ದು: ಆದರೆ ಮೆಹುಲ್ ಚೋಕ್ಸಿ ಪರ ವಕೀಲರು ವಾದಿಸುವುದು ಬೇರೆ, ಆಂಟಿಗುವಾದ ಜೊಲ್ಲಿ ಬಂದರಿನಿಂದ ಚೋಕ್ಸಿಯನ್ನು ಅಪಹರಿಸಲಾಗಿತ್ತು, ಅವರು ಪರಾರಿಯಾಗಿದ್ದಲ್ಲ. ಆಂಟಿಗುವಾ ಮತ್ತು ಭಾರತದ ಪೊಲೀಸರ ವೇಷದಲ್ಲಿ ಬಂದು ಅಪಹರಿಸಿ ಹಡಗು ಮೂಲಕ ಡೊಮಿನಿಕಾಗೆ ಕರೆತಂದಿದ್ದರು ಎಂದು ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com