ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಷ್ಯಾ, ಫಿಲಿಪೈನ್ಸ್‌ನ ಇಬ್ಬರು ಪತ್ರಕರ್ತರಿಗೆ ನೊಬೆಲ್ ಶಾಂತಿ ಪುರಸ್ಕಾರ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಫಿಲಿಪೈನ್ಸ್‌ನ ಪತ್ರಕರ್ತೆ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರಿಗೆ 2021 ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ.
Published: 08th October 2021 04:22 PM | Last Updated: 08th October 2021 04:22 PM | A+A A-

ಮಾರಿಯಾ ರೆಸ್ಸಾ - ಡಿಮಿಟ್ರಿ ಮುರಾಟೋವ್
ಒಸ್ಲೋ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಫಿಲಿಪೈನ್ಸ್‌ನ ಪತ್ರಕರ್ತೆ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರಿಗೆ 2021 ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ.
ಫಿಲಿಪೈನ್ಸ್ ಮತ್ತು ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಪರಿಗಣಿಸಿ ಮಾರಿಯಾ ರೆಸ್ಸಾ ಮತ್ತು ಮುರಾಟೋವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೀಸ್-ಆಂಡರ್ಸನ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಇದನ್ನು ಓದಿ: ತಾಂಜೇನಿಯಾ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
ಮುಕ್ತ, ಸ್ವತಂತ್ರ ಮತ್ತು ಸತ್ಯಾಧಾರಿತ ಪತ್ರಿಕೋದ್ಯಮವು ಅಧಿಕಾರ ದುರುಪಯೋಗ, ಸುಳ್ಳು ಮತ್ತು ಯುದ್ಧದ ವಿರುದ್ಧ ರಕ್ಷಣೆಯಂತೆ ನಿಲ್ಲುತ್ತದೆ ಎಂದು ರೀಸ್-ಆಂಡರ್ಸನ್ ಹೇಳಿದರು.
"ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯವು ವಿಶ್ವದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಅದರ ರಕ್ಷಣೆಗಾಗಿ ನಿಲ್ಲುವ ಎಲ್ಲಾ ಪತ್ರಕರ್ತರನ್ನು ಈ ಇಬ್ಬರು ಪ್ರಶಸ್ತಿ ಪುರಸ್ಕೃತರು ಪ್ರತಿನಿಧಿಸುತ್ತಾರೆ " ಎಂದು ರೀಸ್-ಆಂಡರ್ಸನ್ ಅವರು ಹೇಳಿದ್ದಾರೆ.
1935ರ ನಂತರ ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುತ್ತಿದೆ. 1935 ಜರ್ಮನಿಯ ಪತ್ರಕರ್ತ ಕಾರ್ಲ್ ವಾನ್ ಒಸಿಟೆಸ್ಕಿ ಅವರು ತಮ್ಮ ದೇಶ ಜಾಗತಿಕ ಯುದ್ಧಾ ನಂತರ ಹೇಗೆ ಮತ್ತೆ ಶಸ್ತ್ರಸಜ್ಜಿಕೆ ಆರಂಭಿಸಿತ್ತು ಎಂಬುದನ್ನು ಜಗತ್ತಿಗೆ ತಿಳಿಸಿದ್ದರು. ಅದಕ್ಕಾಗಿ ಅವರಿಗೆ ಶಾಂತಿ ಪ್ರಶಸ್ತಿ ನೀಡಲಾಗಿತ್ತು.