28 ವಸ್ತುಗಳನ್ನು ಸ್ವದೇಶದ ಕಂಪನಿಗಳಿಂದ ಖರೀದಿಸುವಂತೆ ಸೌದಿ ದೊರೆ ಆದೇಶ
ಅರಬ್ ದೇಶ ಸೌದಿ ಅರೇಬಿಯಾ ಕೂಡ ಈಗ ಸ್ವದೇಶಿ ಮಂತ್ರ ಜಪಿಸುತ್ತಿದೆ. ತಮ್ಮ ದೇಶದಲ್ಲಿ ತಯಾರಾಗುವ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಸರ್ಕಾರಿ ಗುತ್ತಿಗೆದಾರರಿಗೆ ಸೂಚಿಸಿದೆ.
Published: 14th September 2021 02:03 PM | Last Updated: 14th September 2021 02:19 PM | A+A A-

ಸಾಂದರ್ಭಿಕ ಚಿತ್ರ
ರಿಯಾದ್: ಅರಬ್ ದೇಶ ಸೌದಿ ಅರೇಬಿಯಾ ಕೂಡ ಈಗ ಸ್ವದೇಶಿ ಮಂತ್ರ ಜಪಿಸುತ್ತಿದೆ. ತಮ್ಮ ದೇಶದಲ್ಲಿ ತಯಾರಾಗುವ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಸರ್ಕಾರಿ ಗುತ್ತಿಗೆದಾರರಿಗೆ ಸೂಚಿಸಿದೆ. ಸೌದಿ ಅರೇಬಿಯಾ ದೊರೆಯ ಆದೇಶದಂತೆ ಸ್ಥಳೀಯ ವಿಷಯಗಳು ಹಾಗೂ ಸರ್ಕಾರಿ ಸಂಗ್ರಹಣೆ ಪ್ರಾಧಿಕಾರ 28 ವಸ್ತುಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಈ ಉತ್ಪನ್ನಗಳನ್ನು ಸರ್ಕಾರಿ ಗುತ್ತಿಗೆದಾರರು ಕಡ್ಡಾಯವಾಗಿ ರಾಷ್ಟ್ರೀಯ ಕಂಪನಿಗಳಿಂದ ಖರೀದಿಸಬೇಕು ಎಂದು ಸೂಚಿಸಿದೆ. ಈ ಪಟ್ಟಿಯಲ್ಲಿ ಪ್ರಮುಖವಾಗಿ ಮಾಂಸ, ಮೀನು, ಕೋಳಿ, ಡೈರಿ ಉತ್ಪನ್ನಗಳು ಒಳಗೊಂಡಿದೆ.
ಈ ಮೂಲಕ ದೇಶದಲ್ಲಿ ಸ್ಥಳೀಯ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ತೈಲೇತರ ಆದಾಯಕ್ಕೆ ದಾರಿ ಮಾಡಿಕೊಡುವುದು ಕೂಡ ಸರ್ಕಾರದ ಆಲೋಚನೆಯಾಗಿದೆ. ಈ ಕ್ರಮವಾಗಿ ಸ್ಥಳೀಯ ಉತ್ಪನ್ನಗಳ ಅತ್ಯಧಿಕ ಬಳಕೆಯ ವಲಯವನ್ನು ಗುರುತಿಸಲಾಗಿದೆ.
ಅಲ್ಲಿನ ಗುತ್ತಿಗೆದಾರರು ಕಟ್ಟುನಿಟ್ಟಾಗಿ ನಿಯಮಾವಳಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಯವರೆಗೆ, ಸೇನೆ, ವೈದ್ಯಕೀಯ, ಶಿಕ್ಷಣ, ಕಾರಾಗೃಹಗಳಂತಹ ಇಲಾಖೆಗಳನ್ನು ಸರ್ಕಾರ ಗುರುತಿಸಿದೆ.
ಸೌದಿ ಅರೇಬಿಯದ ಸ್ಥಳೀಯ ವಿಷಯ ಹಾಗೂ ಸರ್ಕಾರಿ ಸಂಗ್ರಹಣಾ ಪ್ರಾಧಿಕಾರದ ಸಿಇಒ ಅಬ್ದುಲ್ ರಹಮಾನ್ ಅಲ್ ಸಮರಿ ಈ ಕುರಿತು ಮಾತನಾಡಿ ತೈಲೇತರ ವಲಯದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಈ ನೀತಿಯ ಅನುಷ್ಠಾನದಲ್ಲಿ ರಾಷ್ಟ್ರೀಯ ಪರಿಸರ ಸಚಿವಾಲಯ, ಜಲಸಂಪನ್ಮೂಲ ಸಚಿವಾಲಯ ಹಾಗೂ ಕೃಷಿ ಸಚಿವಾಲಯದ ಸಹಕಾರ ಪಡೆದುಕೊಂಡಿದ್ದೇವೆ. ಜೊತೆಗೆ ಕೈಗಾರಿಕೆ ಹಾಗೂ ಖನಿಜ ಸಂಪನ್ಮೂಲಗಳ ಸಚಿವಾಲಯ, ಆಹಾರ ಮತ್ತು ಔಷಧಗಳ ಸಚಿವಾಲಯ, ಸೌದಿ ಚೇಂಬರ್ಸ್ ಆಫ್ ಕಾಮರ್ಸ್ ಕೂಡ ಸಹಕರಿಸಿವೆ ಎಂದು ಅವರು ಹೇಳಿದ್ದಾರೆ.