ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು; ಪಾಕಿಸ್ತಾನದಲ್ಲಿ ಹಿಂದೂ ಕುಟುಂಬಕ್ಕೆ ಕಿರುಕುಳ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಮಸೀದಿಯಿಂದ ಕುಡಿಯುವ ನೀರು ತರಲು ಹೋಗಿದ್ದಕ್ಕೆ ಕೆಲ ಸ್ಥಳೀಯರಿಂದ ಕಿರುಕುಳ ಅನುಭವಿಸಿದ್ದಾರೆ.
Published: 20th September 2021 02:29 PM | Last Updated: 20th September 2021 02:29 PM | A+A A-

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಮಸೀದಿಯಿಂದ ಕುಡಿಯುವ ನೀರು ತರಲು ಹೋಗಿದ್ದಕ್ಕೆ ಕೆಲ ಸ್ಥಳೀಯರಿಂದ ಕಿರುಕುಳ ಅನುಭವಿಸಿದ್ದಾರೆ. ಆರಾಧನಾ ಸ್ಥಳದ ಪಾವಿತ್ರ್ಯತೆ ಉಲ್ಲಂಘನೆಗಾಗಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
ಪಂಜಾಬ್‌ನ ರಹೀಮಿಯಾರ್ ಖಾನ್ ನಗರದ ನಿವಾಸಿಯಾಗಿರುವ ಆಲಂ ರಾಮ್ ಭೀಲ್ ಹೊಲವೊಂದರಲ್ಲಿ ಪತ್ನಿ ಸೇರಿದಂತೆ ಅವರ ಇತರ ಕುಟುಂಬ ಸದಸ್ಯರೊಂದಿಗೆ ಹಸಿ ಹತ್ತಿಯನ್ನು ತೆಗೆಯುತ್ತಿದ್ದಾಗ ಕುಡಿಯುವ ನೀರಿಗಾಗಿ ಹತ್ತಿರವಿದ್ದ ಮಸೀದಿಗೆ ಹೋದಾಗ ಕೆಲವು ಸ್ಥಳೀಯ ಭೂಮಾಲೀಕರು ಅವರನ್ನು ಥಳಿಸಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಕುಟುಂಬ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಅಲ್ಲಿಗೆ ಬಂದ ಭೂ ಮಾಲೀಕರು ತಮ್ಮ ಡೇರಾಗಳಲ್ಲಿ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಅಲ್ಲದೇ, ಮಸೀದಿಯಲ್ಲಿ ಪಾವಿತ್ರ್ಯತೆ ಉಲ್ಲಂಘನೆಗಾಗಿ ಕಿರುಕುಳ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪೊಲೀಸರು ದಾಳಿಕೋರರ ವಿರುದ್ಧ ಕೇಸ್ ದಾಖಲಿಸಲಿಲ್ಲ ಎಂದು ಭೀಲ್ ಹೇಳಿದ್ದಾರೆ. ಪೊಲೀಸ್ ನಿರ್ಲಕ್ಷ್ಯವನ್ನು ಪ್ರತಿಭಟಿಸಿ, ಬೀಲ್ ಇನ್ನೊಬ್ಬ ಕುಲದ ಸದಸ್ಯ ಪೀಟರ್ ಜಾನ್ ಭೀಲ್ ಜೊತೆಗೆ ಪೊಲೀಸ್ ಠಾಣೆಯ ಹೊರಗೆ ಧರಣಿ ನಡೆಸಿದರು. ಜಿಲ್ಲಾ ಶಾಂತಿ ಸಮಿತಿಯ ಸದಸ್ಯರೂ ಆಗಿರುವ ಪೀಟರ್ ಅವರು, ತಾವು ಆಡಳಿತಾರೂಢ ಪಿಟಿಐ ಶಾಸಕ ಜಾವೇದ್ ವಾರಿಯಚ್ ಅವರನ್ನು ಸಂಪರ್ಕಿಸಿದ್ದು, ಅವರು ಶುಕ್ರವಾರ ಪ್ರಕರಣ ದಾಖಲಿಸಲು ಸಹಾಯ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಗಮನ ಹರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಅಸಾದ್ ಸರ್ಫ್ರಾಜ್ ಹೇಳಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅಲ್ಪಸಂಖ್ಯಾತ ಹಿಂದೂ ಹಿರಿಯರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಉಪ ಆಯುಕ್ತ ಡಾ. ಖುರಾಮ್ ಶೆಹಜಾದ್ ಹೇಳಿದ್ದಾರೆ.
ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದುಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಬಹುತೇಕ ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದು, ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ. ಅವರು ಆಗಾಗ್ಗೆ ಉಗ್ರರ ಕಿರುಕುಳದ ಬಗ್ಗೆ ದೂರು ನೀಡುತ್ತಾರೆ.