ಬಾಂಗ್ಲಾದೇಶದಲ್ಲಿ ಇಂಧನ ದರ ಶೇ.50 ರಷ್ಟು ಏರಿಕೆ; ಇತಿಹಾಸದಲ್ಲೇ ದಾಖಲೆಯ ಬೆಲೆ ಏರಿಕೆ
ಬಾಂಗ್ಲ: ನೆರೆಯ ಬಾಂಗ್ಲಾದೇಶದಲ್ಲಿ ಇಂಧನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಬಾಂಗ್ಲಾದೇಶ ಸರ್ಕಾರವು ಇಂಧನ ಬೆಲೆಯನ್ನು ಶೇಕಡಾ 51.7 ರಷ್ಟು ಹೆಚ್ಚಿಸಿದೆ. ಹೊಸ ಬೆಲೆಗಳು ಶನಿವಾರದಿಂದಲೇ ಜಾರಿಗೆ ಬಂದಿವೆ.
ಇದರಿಂದಾಗಿ ಬಾಂಗ್ಲಾದೇಶದಲ್ಲಿ ಹಣದುಬ್ಬರದ ಭೀತಿ ಮತ್ತಷ್ಟು ಹೆಚ್ಚಿದೆ. ಮೂಲಗಳ ಪ್ರಕಾರ, ಸರ್ಕಾರದ ಈ ಕ್ರಮವು ಸಬ್ಸಿಡಿ ಹೊರೆ ಕಡಿಮೆ ಮಾಡಲಿದೆ ಎಂಬ ಲೆಕ್ಕಾಚಾರ ಹಾಕಿಕೊಂಡಿದೆ.
ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಒಂದು ಲೀಟರ್ ಪೆಟ್ರೋಲ್ ಬೆಲೆ ಈಗ 130 ಟಾಕಾ (ಕರೆನ್ಸಿ) ಕ್ಕೆ ಏರಿಕೆಯಾಗಿದೆ. ಇದರಲ್ಲಿ 44 ಟಾಕಾ ಹೆಚ್ಚಳ ಕಂಡಿದೆ. ಸರಕಾರದ ನಡೆಯಿಂದ ಆಕ್ರೋಶಗೊಂಡಿರುವ ಬಾಂಗ್ಲಾದ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಸರಕಾರ, ರಷ್ಯಾ ಹಾಗೂ ಉಕ್ರೇನ್ ಯುದ್ಧ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸಾಮಾನ್ಯ ಸ್ಥಿತಿಗೆ ಬಂದಾಗ ದರ ಪರಿಶೀಲಿಸಲಾಗುವುದು ಎಂದು ಬಾಂಗ್ಲಾ ಸರಕಾರ ಹೇಳಿದೆ.
ಬಾಂಗ್ಲಾದೇಶದಲ್ಲಿ ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆ ಶೇ.42.5ರಷ್ಟು ಏರಿಕೆಯಾಗಿದೆ. ಈಗ ಡೀಸೆಲ್ ಮತ್ತು ಸೀಮೆಎಣ್ಣೆ ಪ್ರತಿ ಲೀಟರ್‌ಗೆ ಟಾಕಾ 114 ದರದಲ್ಲಿ ದೊರೆಯುತ್ತಿದೆ. ಚಿಲ್ಲರೆ ಮಟ್ಟದಲ್ಲಿ ಇತ್ತೀಚಿನ ಬೆಲೆ ಏರಿಕೆಯು ಸರ್ಕಾರಿ ವಿತರಣಾ ಕಂಪನಿಗಳ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಬೆಲೆಯಲ್ಲಿನ ಹೆಚ್ಚಳವು ಹಣದುಬ್ಬರ ದರದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಬಾಂಗ್ಲಾ ಆರ್ಥಿಕ ತಜ್ಞರ ಅಭಿಪ್ರಾಯ. ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶದ $416 ಶತಕೋಟಿ ಆರ್ಥಿಕತೆ ಹೊಂದಿದ್ದು, ವರ್ಷಗಳಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಆದಾಗ್ಯೂ, ಏರುತ್ತಿರುವ ಇಂಧನ ಮತ್ತು ಆಹಾರದ ಬೆಲೆಗಳು ಅದರ ಆಮದು ಬಿಲ್ ಅನ್ನು ಹೆಚ್ಚಿಸಿವೆ, ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಜಾಗತಿಕ ಸಾಲ ನೀಡುವ ಸಂಸ್ಥೆಗಳಿಂದ ಸಾಲ ಪಡೆಯುವಂತೆ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ