ಇಸ್ಲಾಮಾಬಾದ್(ಪಾಕಿಸ್ತಾನ): ಶುಕ್ರವಾರ ಬಂತೆಂದರೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು ಪಾಕ್ ಕಂಗೆಡುವಂತೆ ಮಾಡಿದೆ. ಇಂದು ಇಸ್ಲಾಮಾಬಾದ್ ನ ವಸತಿ ಪ್ರದೇಶದಲ್ಲಿ ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು ಇಬ್ಬರು ಶಂಕಿತ ಭಯೋತ್ಪಾದಕರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.
ದೇಶದ ಸುರಕ್ಷಿತ ನಗರಗಳಲ್ಲಿ ಒಂದಾದ ಇಸ್ಲಾಮಾಬಾದ್ ನಲ್ಲಿ ಭಯೋತ್ಪಾದಕರ ಉಪಸ್ಥಿತಿ ಭಯವನ್ನುಂಟು ಮಾಡಿದೆ. ಇನ್ನು ಬಾಂಬ್ ದಾಳಿಯಲ್ಲಿ ಕನಿಷ್ಠ ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಏಳು ಮಂದಿ ಸ್ಥಳೀಯರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ರಾಜಧಾನಿಯಲ್ಲಿ ಶುಕ್ರವಾರದ ಬಾಂಬ್ ದಾಳಿಯು ಸೇನೆ ಮತ್ತು ಸರ್ಕಾರಿ ಬೇಹುಗಾರಿಕಾ ಏಜೆನ್ಸಿಗಳ ಭದ್ರಕೋಟೆಯಾದ ರಾವಲ್ಪಿಂಡಿಯ ಗ್ಯಾರಿಸನ್ ಪಟ್ಟಣದಿಂದ 15 ಕಿಲೋಮೀಟರ್ ದೂರದಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ನಿಯಮಿತ ತಪಾಸಣೆಗಾಗಿ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಆದೇಶಿಸಿದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರ ಚಾಲಕ ನಿಲ್ಲಿಸುವ ಬದಲು ಒಳಗೆ ಅಡಗಿಸಿಟ್ಟಿದ್ದ ಸ್ಫೋಟಕಗಳನ್ನು ಸಿಡಿಸಿದ್ದಾನೆ. ಕಾರಿನಲ್ಲಿದ್ದ ಮಹಿಳಾ ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಾಬಾದ್‌ನ ಹಿರಿಯ ಪೊಲೀಸ್ ಅಧಿಕಾರಿ ಸುಹೇಲ್ ಜಾಫರ್ ಚಾತಾ ಅವರು ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಪ್ರದೇಶವನ್ನು ಸುತ್ತುವರೆದಿದ್ದು ಟಿವಿ ದೃಶ್ಯಾವಳಲ್ಲಿ ಸುಟ್ಟುಹೋದ ಕಾರನ್ನು ಕಾಣಬಹುದಾಗಿದೆ. ಬೈಕ್ ನಲ್ಲಿ ಪೊಲೀಸರು ಕಾರನ್ನು ಹಿಂಬಾಲಿಸಿ ವಾಹನದೊಳಗಿದ್ದ ವ್ಯಕ್ತಿಯನ್ನು ಹೊರಗೆ ಬರುವಂತೆ ಸೂಚಿಸುತ್ತಿರುವುದನ್ನು ಕಂಡಿದ್ದಾಗಿ ನಿವಾಸಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಸುತ್ತುವರಿದ ನಂತರ ಶಂಕಿತ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಿದ್ದಾನೆ ಎಂದು ನಗರದ ಉಪ ಪೊಲೀಸ್ ಮುಖ್ಯಸ್ಥ ಚಾಥಾ ಖಚಿತಪಡಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. ಇನ್ನು ಪೊಲೀಸರಿಗೆ ಧನ್ಯವಾದ ತಿಳಿಸಿದ ಅವರು, ಪೊಲೀಸ್ ಅಧಿಕಾರಿಗಳು ತಮ್ಮ ರಕ್ತವನ್ನು ತ್ಯಾಗ ಮಾಡುವ ಮೂಲಕ ಭಯೋತ್ಪಾದಕರನ್ನು ತಡೆದಿದ್ದಾರೆ. ದೇಶವು ತನ್ನ ವೀರ ಸೈನಿಕರಿಗೆ ನಮನ ಸಲ್ಲಿಸುತ್ತದೆ ಎಂದು ಷರೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಂಬ್ ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಪಾಕಿಸ್ತಾನಿ ತಾಲಿಬಾನ್‌ಗಳು ನವೆಂಬರ್‌ನಿಂದ ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಹೆಚ್ಚಿಸಿವೆ. ಅವರು ಏಕಪಕ್ಷೀಯವಾಗಿ ಪಾಕಿಸ್ತಾನ ಸರ್ಕಾರದೊಂದಿಗೆ ಒಂದು ತಿಂಗಳ ಕಾಲ ಕದನ ವಿರಾಮವನ್ನು ಕೊನೆಗೊಳಿಸಿದರು.
Advertisement