ಶ್ರೀಲಂಕಾ ಬಿಕ್ಕಟ್ಟು: ಇನ್ನೂ ರಾಜೀನಾಮೆ ನೀಡದ ಗೋಟಬಯ ರಾಜಪಕ್ಸ, ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಪಲಾಯನ

ದ್ವೀಪ ರಾಷ್ಟ್ರ ಅತ್ಯಂತ ಭೀಕರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿರುವಂತೆಯೇ, ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಗುರುವಾರ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಪಲಾಯನ ಮಾಡಿದ್ದಾರೆ.
ಗೋಟಬಯ ರಾಜಪಕ್ಸ
ಗೋಟಬಯ ರಾಜಪಕ್ಸ

ಕೊಲಂಬೋ: ದ್ವೀಪ ರಾಷ್ಟ್ರ ಅತ್ಯಂತ ಭೀಕರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿರುವಂತೆಯೇ, ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಗುರುವಾರ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಪಲಾಯನ ಮಾಡಿದ್ದಾರೆ. ರಾಜಪಕ್ಸ ಮಾಲ್ಡೀವ್ಸ್‌ನಿಂದ ಸೌದಿ ಏರ್‌ಲೈನ್ ವಿಮಾನ ಎಸ್ ವಿ 788ರಲ್ಲಿ  ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಬಿಕ್ಕಟ್ಟು ಉಲ್ಬಣ ಹಾಗೂ ತೀವ್ರ ಪ್ರತಿಭಟನೆ ಭುಗಿಲೆಳುತ್ತಿದ್ದಂತೆ ಬುಧವಾರ ರಾಜಿನಾಮೆ ನೀಡುವುದಾಗಿ ಭರವಸೆ ನೀಡಿದ್ದ 73 ವರ್ಷದ ನಾಯಕ ರಾಜಪಕ್ಸ,  ದೇಶದಿಂದ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ಇದಕ್ಕೂ ಮೊದಲು, ರಾಜಪಕ್ಸ, ಅವರ ಪತ್ನಿ ಲೋಮಾ ಮತ್ತು ಅವರ ಇಬ್ಬರು ಭದ್ರತಾ ಅಧಿಕಾರಿಗಳು ಬುಧವಾರ ರಾತ್ರಿ ಮಾಲೆಯಿಂದ ಎಸ್ ಕ್ಯೂ 437 ವಿಮಾನದಲ್ಲಿ ಸಿಂಗಾಪುರಕ್ಕೆ ತೆರಳುವ ನಿರೀಕ್ಷೆಯಿತ್ತು. ಆದರೆ ಭದ್ರತಾ ಕಾರಣಗಳಿಂದ ಪ್ರಯಾಣಿಸಲಿಲ್ಲ  ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ. ಈ ಮಧ್ಯೆ, ರಾಜಪಕ್ಸ ಅವರಿಂದ ಇನ್ನೂ ರಾಜೀನಾಮೆ ಪಡೆಯಬೇಕಾಗಿದೆ ಎಂದು ಶ್ರೀಲಂಕಾ ಸಂಸತ್ ಸ್ಪೀಕರ್ ಮಹಿಂದಾ ಯಾಪ ಅಬೇವರ್ದನಾ ಹೇಳಿದ್ದಾರೆ.

ರಾಜಪಕ್ಸ ಹೊಸ ಸರ್ಕಾರದಿಂದ ಬಂಧನದ ಸಾಧ್ಯತೆಯನ್ನು ತಪ್ಪಿಸಲು ರಾಜೀನಾಮೆ ನೀಡುವ ಮೊದಲು ಬುಧವಾರ ದೇಶದಿಂದ ಪಲಾಯನ ಮಾಡಿದ್ದರು.ಶನಿವಾರ  ಸಾವಿರಾರು ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ನಂತರ, ಬುಧವಾರ ರಾಜೀನಾಮೆ ನೀಡುವುದಾಗಿ ರಾಜಪಕ್ಸ ಘೋಷಿಸಿದ್ದರು. ಮಾಲ್ಡೀವ್ಸ್ ಸಂಸತ್ ಸ್ಪೀಕರ್ ಮತ್ತು ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com