ಹುದ್ದೆ ತ್ಯಜಿಸಲು ಬೋರಿಸ್ ಜಾನ್ಸನ್ ಒಪ್ಪಿಗೆ: ಹೊಸ ನಾಯಕನ ಆಯ್ಕೆಯಾಗುವವರೆಗೆ ಇಂಗ್ಲೆಂಡ್ ಪ್ರಧಾನಿಯಾಗಿ ಮುಂದುವರಿಕೆ

ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಬೊರಿಸ್ ಜಾನ್ಸನ್
ಬೊರಿಸ್ ಜಾನ್ಸನ್

ಲಂಡನ್: ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ತಮ್ಮ ಸಂಪುಟದ 40ಕ್ಕೂ ಹೆಚ್ಚು ಸಚಿವರು ಹುದ್ದೆಯನ್ನು ತ್ಯಜಿಸಿ ಅವರಿಗೂ ಪ್ರಧಾನಿ ಹುದ್ದೆ ತ್ಯಜಿಸುವಂತೆ ಸೂಚಿಸಿದ ನಂತರ ಬೊರಿಸ್ ಜಾನ್ಸನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ಸರ್ವೇಟಿವ್ ಪಕ್ಷ ನೂತನ ನಾಯಕನನ್ನು ಆರಿಸುವವರೆಗೆ ಬೊರಿಸ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೇ ಅಥವಾ ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆ ತ್ಯಜಿಸಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. 

ಲಂಡನ್ ನ ಡೌನಿಂಗ್ ಸ್ಟ್ರೀಟ್‌ನ ವರದಿಗಳ ಪ್ರಕಾರ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಅಂತಿಮವಾಗಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವದಿಂದ ಕೆಳಗಿಳಿಯಲು ಒಪ್ಪಿಕೊಂಡಿದ್ದಾರೆ. ಮುಂದಿನ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಮಾವೇಶದ ವೇಳೆಗೆ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ 58 ವರ್ಷದ ಜಾನ್ಸನ್ ಬ್ರಿಟನ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. 

ಸದ್ಯದಲ್ಲಿಯೇ ಬೊರಿಸ್ ಜಾನ್ಸನ್ ಔಪಚಾರಿಕವಾಗಿ ತಮ್ಮ ರಾಜೀನಾಮೆಯನ್ನು ಘೋಷಿಸುವ ಸಾಧ್ಯತೆಯಿದೆ. ಮೊನ್ನೆ ಮಂಗಳವಾರದಿಂದ ಅವರ ಕ್ಯಾಬಿನೆಟ್‌ನಿಂದ ಒಬ್ಬೊಬ್ಬರೇ ಸಚಿವರು ರಾಜೀನಾಮೆ ನೀಡುತ್ತಾ ಹೋದರು. ಲಂಡನ್ ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಬೊರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಇರಾಕಿ-ಮೂಲದ ಮಂತ್ರಿ ನಾಧಿಮ್ ಜಹಾವಿ, ಬೊರಿಸ್ ಅವರ ಅಧಿಕಾರವನ್ನು ಬಹಿರಂಗವಾಗಿ ಪ್ರಶ್ನಿಸಿ ಅವರ ನಿರ್ಗಮನಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. 

ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ತಮ್ಮ ವೃತ್ತಿ ಜೀವನದ ಅತಿದೊಡ್ಡ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. 40 ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ಸರ್ಕಾರವನ್ನು ತೊರೆದ ನಂತರ ಅವರ ರಾಜೀನಾಮೆಗೆ ತೀವ್ರ ಒತ್ತಡ ಕೇಳಿಬಂತು.

ಈ ಬಿಕ್ಕಟ್ಟಿನ ನಡುವೆ, ಬೊರಿಸ್ ಜಾನ್ಸನ್ ಅವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾಗ ಬರೆದ ಹಳೆಯ ಲೇಖನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ದಿ ಟೆಲಿಗ್ರಾಫ್‌ಗಾಗಿ 2010 ರಲ್ಲಿ ನೀಡಿದ್ದ ಸಂದರ್ಶನದ ವಿಡಿಯೊ ಕ್ಲಿಪ್ ನಲ್ಲಿ ಜಾನ್ಸನ್ ಬ್ರಿಟನ್ ನ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್ ಅವರನ್ನು ಟೀಕಿಸಿದ್ದಾರೆ. 

ಬ್ರೌನ್ ರಾಜೀನಾಮೆ ನೀಡುವ ಒಂದು ದಿನದ ಮೊದಲು ಅಂದರೆ ಮೇ 10, 2010 ರಂದು ಈ ತುಣುಕು ಪ್ರಕಟವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com