ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಆರೋಗ್ಯ ಸ್ಥಿತಿ ಗಂಭೀರ: ಅವರ ಮೇಲೆ ಗನ್ ದಾಳಿ ಹೇಗಾಯಿತು?

ಜಪಾನ್ ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯವರ ಮೇಲೆ ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಶಿಂಜೊ ಅಬೆಯವರಿಗೆ ದಾಳಿಯಲ್ಲಿ ಭೀಕರವಾಗಿ ಗಾಯಗಳಾಗಿದ್ದು ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದಾರೆ.
ಗುಂಡಿನ ದಾಳಿಗೊಳಗಾಗಿ ಕುಸಿದ ಬಿದ್ದ ಶಿಂಜೊ ಅಬೆ, ಬಲಚಿತ್ರದಲ್ಲಿ ಗುಂಡಿನ ದಾಳಿ ನಡೆದ ನಾರಾ ನಗರದ ಸ್ಥಳ
ಗುಂಡಿನ ದಾಳಿಗೊಳಗಾಗಿ ಕುಸಿದ ಬಿದ್ದ ಶಿಂಜೊ ಅಬೆ, ಬಲಚಿತ್ರದಲ್ಲಿ ಗುಂಡಿನ ದಾಳಿ ನಡೆದ ನಾರಾ ನಗರದ ಸ್ಥಳ
Updated on

ಟೋಕಿಯೊ: ಜಪಾನ್ ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯವರ(Japan ex PM Shinzo Abe) ಮೇಲೆ ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಶಿಂಜೊ ಅಬೆಯವರಿಗೆ ದಾಳಿಯಲ್ಲಿ ಭೀಕರವಾಗಿ ಗಾಯಗಳಾಗಿದ್ದು ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದಾರೆ ಎಂದು ಜಪಾನ್ ನ ಸ್ಥಳೀಯ ಮಾಧ್ಯಮ ಹಾಗೂ ರಾಷ್ಟ್ರೀಯ ಸುದ್ದಿವಾಹಿನಿ ಎನ್ ಹೆಚ್ ಕೆ ಮತ್ತು ಕ್ಯೊಡೊ ನ್ಯೂಸ್ ಸಂಸ್ಥೆ ವರದಿ ಮಾಡಿದೆ.

ಭಯಭೀತ ಭೀಕರ ಸಾವನ್ನು ಅಧಿಕೃತವಾಗಿ ದೃಢೀಕರಿಸುವ ಮೊದಲು, ಜಪಾನ್‌ನಲ್ಲಿ ಕಾರ್ಡಯೊರೆಸ್ಪಿರೇಟರಿ ಅರೆಸ್ಟ್ (cardiorespiratory arrest) ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ದೇಶದಲ್ಲಿ ಹಿಂಸಾಚಾರ ಅಪರಾಧಗಳು ಕಡಿಮೆಯಿದ್ದರೂ ಮತ್ತು ಅತಿ ಕಠಿಣ ಬಂದೂಕು ನೀತಿಯಿದ್ದರೂ ಒಬ್ಬ ಮಾಜಿ ಪ್ರಧಾನಿ ಹಾಗೂ ದೇಶದ ಉನ್ನತ ರಾಜಕಾರಣಿ ಮೇಲೆ ಈ ರೀತಿ ಗುಂಡಿನ ದಾಳಿ ನಡೆದಿರುವುದು ತೀವ್ರ ಆಘಾತವನ್ನುಂಟುಮಾಡಿದೆ. 

ನಾಡಿದ್ದು ಭಾನುವಾರ ಜಪಾನ್ ಸಂಸತ್ತಿನ ಮೇಲ್ಮನೆಗೆ ಚುನಾವಣೆ ನಡೆಯಲಿದ್ದು ಅದರ ನಿಮಿತ್ತ ಶಿಂಜೊ ಅಬೆಯವರು ಇಂದು ಬೆಳಗ್ಗೆ ಪೂರ್ವ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನಿರತರಾಗಿದ್ದರು. ಅಲ್ಲಿ ಭದ್ರತೆಯಿದ್ದರೂ ಕೂಡ ನೆರೆದಿದ್ದ ಜನರು ಅಬೆಯವರನ್ನು ಸುಲಭವಾಗಿ ತಲುಪುವಂತೆ ಅವರ ಹತ್ತಿರ ಹೋಗುವಂತಹ ಪರಿಸ್ಥಿತಿಯಿತ್ತು.

ಎನ್ ಹೆಚ್ ಕೆ ಮಾಧ್ಯಮದಲ್ಲಿ (NHK Japan) ಬರುತ್ತಿರುವ ವಿಡಿಯೊದ ಪ್ರಕಾರ ಅಬೆಯವರು ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿರುತ್ತಾರೆ ಆಗ ದೊಡ್ಡ ಸ್ಫೋಟವೊಂದು ಕೇಳಿಬರುತ್ತದೆ. ನಂತರ ಗಾಳಿಯಲ್ಲಿ ದಟ್ಟ ಹೊಗೆ ಆವರಿಸುತ್ತದೆ. ನಂತರ ಓರ್ವ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ಆಚೆಗೆ ಕರೆತರುತ್ತಾರೆ.

ಅಬೆಯವರು ಭಾಷಣ ಮಾಡುತ್ತಿರುತ್ತಾರೆ, ಆಗ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಗುಂಡು ಹಾರಿಸುತ್ತಾರೆ. ಮೊದಲಿಗೆ ನೆರೆದಿದ್ದವರು ಆಟದ ಬಂದೂಕು ಎಂದೇ ಭಾವಿಸಿದ್ದರು. ಅಬೆಯವರಿಗೆ ಮೊದಲು ಹಾರಿಸಿದ ಗುಂಡಿನಿಂದ ಏನಾಗಿರಲಿಲ್ಲ. ನಂತರ ಎರಡನೇ ದಾಳಿ ದೊಡ್ಡ ಮಟ್ಟದ್ದಾಗಿತ್ತು. ದಟ್ಟ ಹೊಗೆ ಕೂಡ ಆವರಿಸಿತು. ಎರಡನೇ ಗುಂಡಿನ ದಾಳಿ ನಂತರ ಎಲ್ಲರೂ ನೆರೆದು ಶಿಂಜೊ ಅಬೆಯವರ ಹೃದಯಕ್ಕೆ ಮಸಾಜ್ ಮಾಡಲು ಹೊರಟರು ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ತಿಳಿಸಿದ್ದಾರೆ.

67 ವರ್ಷದ ಅಬೆ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಕುಸಿದುಬಿದ್ದರು. ಅವರ ಕತ್ತಿಗೆ ತೀವ್ರ ಏಟಾಗಿದೆ ಎಂದು ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಜಿಜಿ ಸುದ್ದಿಸಂಸ್ಥೆಗೆ ತಿಳಿಸಿದೆ. 

ನಾರಾ ಮೆಡಿಕಲ್ ಯೂನಿವರ್ಸಿಟಿ ಆಸ್ಪತ್ರೆಗೆ ಅಬೆಯವರನ್ನು ದಾಖಲಿಸಲಾಗಿದ್ದು ಸದ್ಯ ಅವರ ದೇಹಸ್ಥಿತಿ ಗಂಭೀರವಾಗಿದೆ. ಶಂಕಿತ ಗುಂಡಿನ ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿಶ್ವನಾಯಕರು ಆಘಾತ, ಕಂಬನಿ: ಶಿಂಜೊ ಅಬೆಯವರ ಮೇಲೆ ಹಠಾತ್ ನಡೆದ ಗುಂಡಿನ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವನಾಯಕರು ಕಂಬನಿ ಮಿಡಿದಿದ್ದಾರೆ. ನನ್ನ ಸ್ನೇಹಿತ ಶಿಂಜೊ ಅಬೆಯವರ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಜಪಾನ್ ಜನತೆಗೆ ಪರವಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಕೂಡ ಕಂಬನಿ ಮಿಡಿದಿದ್ದಾರೆ.

ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ವಿಶೇಷ ಸಲಹೆಗಾರ ಜನರಲ್ ನಕಟಾನಿ ಸುದ್ದಿಗಾರರ ಜೊತೆ ಮಾತನಾಡಿ, ಭಯೋತ್ಪಾದನೆ ಅಥವಾ ಹಿಂಸಾಚಾರವನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದಿದ್ದಾರೆ. 

ಇದು ಅನಾಗರಿಕ ಮತ್ತು ದುರುದ್ದೇಶಪೂರಿತ ಕೃತ್ಯ. ಇದನ್ನು ಸಹಿಸಲಾಗುವುದಿಲ್ಲ. ಅವರನ್ನು ಬದುಕಿಸಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ. ಈ ಕ್ಷಣದಲ್ಲಿ  ಅಬೆಯನ್ನು ರಕ್ಷಿಸಲು ವೈದ್ಯರು ತುಂಬಾ ಶ್ರಮಿಸುತ್ತಿದ್ದಾರೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ.

ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿ ಅಬೆ, 2006 ರಲ್ಲಿ ಒಂದು ವರ್ಷ ಮತ್ತು 2012 ರಿಂದ 2020 ರವರೆಗೆ ಅಧಿಕಾರದಲ್ಲಿದ್ದರು, ನಂತರ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು.

ಜಪಾನ್ ನಲ್ಲಿ ಕಠಿಣ ಗನ್ ನೀತಿ: ಜಪಾನ್  ನ ಮಾಜಿ ಪ್ರಧಾನಿ ಮೇಲೆ ಗನ್ ದಾಳಿ ನಡೆದಿದ್ದು ವ್ಯಾಪಕ ಚರ್ಚೆಯನ್ನುಂಟುಮಾಡುತ್ತಿದೆ. ಜಪಾನ್ ವಿಶ್ವದಲ್ಲಿ ಕಠಿಣ ಬಂದೂಕು ನಿಯಂತ್ರಣ ಕಾನೂನು ಹೊಂದಿದೆ. 125 ಮಿಲಿಯನ್ ಜನರಿರುವ ದೇಶದಲ್ಲಿ ಬಂದೂಕುಗಳಿಂದ ವಾರ್ಷಿಕ ಸಾವು ಅಷ್ಟೇನು ಹೆಚ್ಚಾಗಿಲ್ಲ. ಬಂದೂಕು ಪರವಾನಗಿಯನ್ನು ಪಡೆಯುವುದು ಜಪಾನಿನ ನಾಗರಿಕರಿಗೆ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದೆ, ಅವರು ಮೊದಲು ಶೂಟಿಂಗ್ ಅಸೋಸಿಯೇಷನ್‌ನಿಂದ ಶಿಫಾರಸನ್ನು ಪಡೆಯಬೇಕು. ನಂತರ ಕಟ್ಟುನಿಟ್ಟಾದ ಪೊಲೀಸ್ ತಪಾಸಣೆಗೆ ಒಳಗಾಗಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com