
ಲಂಕಾದಲ್ಲಿ ಪ್ರತಿಭಟನೆ
ಕೊಲಂಬೋ: ಶ್ರೀಲಂಕಾ ಸಂಸತ್ ಜುಲೈ 20 ರಂದು ನೂತನ ಅಧ್ಯಕ್ಷರನ್ನು ನೇಮಕ ಮಾಡಲಿದೆ ಎಂದು ಸ್ಪೀಕರ್ ಮಹಿಂದಾ ಯಪ ಅಬೇವರ್ಧನ ಜು.11 ರಂದು ಘೋಶಿಸಿದ್ದಾರೆ. ಲಂಕಾದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಜನ ದಂಗೆ ಎದ್ದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಜಪಕ್ಸ ರಾಜೀನಾಮೆಗೆ ಒತ್ತಡ ಹೆಚ್ಚಿದೆ.
ಲಂಕಾ ಅಧ್ಯಕ್ಷ ಗೋಟಾಬಾಯ ರಾಜಪಕ್ಸ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಸರ್ವಪಕ್ಷ ಸಭೆಯಲ್ಲಿ ನಾಯಕರು ನಿರ್ಧಾರ ಕೈಗೊಂಡಿದ್ದರು. ಅಧ್ಯಕ್ಷ ರಾಜಪಕ್ಸ ಅಧಿಕೃತವಾಗಿ ಇನ್ನಷ್ಟೇ ರಾಜೀನಾಮೆ ನೀಡಬೇಕಿದ್ದು, ಜು.13 ರಂದು ರಾಜೀನಾಮೆ ನೀಡುವುದಾಗಿ ಸ್ಪೀಕರ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ 'ದುಬೈಗೆ ಗಡಿಪಾರು' ವದಂತಿ
ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ಲಂಕಾದಲ್ಲಿ ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ಮಧ್ಯಂತರ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದ್ದು, ಪ್ರಧಾನಿ ರನಿಲ್ ವಿಕ್ರಮಸಿಂಘೆ ಸಹ ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಡಲು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ರಾಜಪಕ್ಸ ರಾಜೀನಾಮೆ ಬಳಿಕ ಸಂಸತ್ ಜು.15 ರಂದು ಸೇರಲಿದ್ದು, ಹೊಸ ಅಧ್ಯಕ್ಷರ ಹುದ್ದೆಗೆ ನೇಮಕದ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಹಾಗೂ ಜು.19 ರಂದು ನಾಪಪತ್ರಗಳನ್ನು ಅಂಗೀಕರಿಸಲು ಮತ್ತೆ ಸಂಸತ್ ಸೇರಲಿದೆ ಎಂದು ಸ್ಪೀಕರ್ ಅಬೇವರ್ಧನ ಹೇಳಿದ್ದಾರೆ.
ಇದನ್ನು ಓದಿ: ಶ್ರೀಲಂಕಾ ಬಿಕ್ಕಟ್ಟು: ರಾಜಪಕ್ಸ ರಾಜೀನಾಮೆ ಬಳಿಕ ಸರ್ವಪಕ್ಷ ಸರ್ಕಾರ ರಚನೆಗೆ ವಿಪಕ್ಷಗಳ ಒಪ್ಪಿಗೆ
ಜು.20 ರಂದು ಹೊಸ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಯಲಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಲಂಕಾದ ಸಂವಿಧಾನದ ಪ್ರಕಾರ ಲಂಕಾದ ಪ್ರಧಾನಿ ಹಾಗೂ ಅಧ್ಯಕ್ಷರು ಏಕಕಾಲದಲ್ಲಿ ರಾಜೀನಾಮೆ ನೀಡಿದರೆ ಸಂಸತ್ ನ ಸ್ಪೀಕರ್ ಅವರು ಲಂಕಾದ ಹಂಗಾಮಿ ಅಧ್ಯಕ್ಷರಾಗಿ ಗರಿಷ್ಠ 30 ದಿನಗಳ ಕಾಲ ಕಾರ್ಯನಿರ್ವಹಿಸಲು ಅವಕಾಶವಿದೆ. ಈ 30 ದಿನಗಳಲ್ಲಿ ಸಂಸತ್ ನ ಸದಸ್ಯರ ಪೈಕಿ ಒಬ್ಬರನ್ನು ಹೊಸ ಅಧ್ಯಕ್ಷರನ್ನಾಗಿ ಸಂಸತ್ ನೇಮಕ ಮಾಡಬೇಕಾಗುತ್ತದೆ. ಹೊಸ ಅಧ್ಯಕ್ಷರು ಈಗಿನ ಅಧ್ಯಕ್ಷರ ಉಳಿದ ಅವಧಿಗೆ (2 ವರ್ಷಗಳ ಅವಧಿಗೆ) ನೇಮಕಗೊಳ್ಳಲಿದ್ದಾರೆ.