ಚಹಾ ಕುಡಿಯೋದು ಕಡಿಮೆ ಮಾಡಿ: ಆಮದು ತಗ್ಗಿಸಲು ಪಾಕ್ ಸರ್ಕಾರದಿಂದ ಸಾರ್ವಜನಿಕರಿಗೆ ಮನವಿ
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಪರಿಸ್ಥಿತಿ ಎಷ್ಟು ಹದಗೆಡುತ್ತಿದೆಯೆಂದರೆ, ಚಹಾ ಬಳಕೆಗೆ ಕಡಿವಾಣ ಹಾಕುವಂತೆ ಸರ್ಕಾರ ತನ್ನ ಜನರಿಗೆ ಮನವಿ ಮಾಡಿದೆ. ಪಾಕಿಸ್ತಾನವು ಸಾಲ ಪಡೆದು ಚಹಾವನ್ನು ಆಮದು...
Published: 15th June 2022 04:31 PM | Last Updated: 15th June 2022 04:38 PM | A+A A-

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಪರಿಸ್ಥಿತಿ ಎಷ್ಟು ಹದಗೆಡುತ್ತಿದೆಯೆಂದರೆ, ಚಹಾ ಬಳಕೆಗೆ ಕಡಿವಾಣ ಹಾಕುವಂತೆ ಸರ್ಕಾರ ತನ್ನ ಜನರಿಗೆ ಮನವಿ ಮಾಡಿದೆ. ಪಾಕಿಸ್ತಾನವು ಸಾಲ ಪಡೆದು ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದು, ಆಮದು ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮ ಸಹಾಯ ಮಾಡುತ್ತದೆ ಎಂದು ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಪಾಕಿಸ್ತಾನ ಚಹಾವನ್ನು ಸಾಲದ ಮೇಲೆ ಆಮದು ಮಾಡಿಕೊಳ್ಳುತ್ತಿರುವ ಕಾರಣ, ಪ್ರತಿದಿನ ಒಂದು ಅಥವಾ ಎರಡು ಕಪ್ ಚಹಾ ಸೇವನೆಯನ್ನು ಕಡಿಮೆ ಮಾಡಲು ದೇಶದ ಜನರನ್ನು ಒತ್ತಾಯಿಸುತ್ತೇನೆ ಎಂದು ಇಕ್ಬಾಲ್ ಹೇಳಿದ್ದಾರೆ.
ವಿಶ್ವದ ಅತಿ ದೊಡ್ಡ ಚಹಾ ಆಮದುದಾರರಲ್ಲಿ ಒಂದಾಗಿರುವ ಪಾಕಿಸ್ತಾನ, ಅದನ್ನು ಆಮದು ಮಾಡಿಕೊಳ್ಳಲು ಸಾಲ ಮಾಡಬೇಕಾಗಿದೆ. ನಾವು ಸಾಲದ ಮೇಲೆ ಚಹಾವನ್ನು ಆಮದು ಮಾಡಿಕೊಳ್ಳುವುದರಿಂದ ಚಹಾ ಸೇವನೆಯನ್ನು 1-2 ಕಪ್‌ಗಳಷ್ಟು ಕಡಿಮೆಗೊಳಿಸುವಂತೆ ನಾನು ದೇಶದ ಜನತೆಗೆ ಮನವಿ ಮಾಡುತ್ತೇನೆ" ಎಂದು ಇಕ್ಬಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬನ್ನಿ, ಭಾರತದ ಮಹತ್ವ ತಿಳಿಯುತ್ತೆ: ಹಿಬಾಜ್ ವಿದ್ಯಾರ್ಥಿನಿಯರಿಗೆ ಯುಟಿ ಖಾದರ್
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಹೆಜ್ಜೆ ಇಡುವುದು ಬಹಳ ಮುಖ್ಯ ಎಂದಿದ್ದಾರೆ. ಇದರೊಂದಿಗೆ ವರ್ತಕರಲ್ಲಿ ಮನವಿ ಮಾಡಿಕೊಂಡ ಸಚಿವರು, ದೇಶದಲ್ಲಿ ವಿದ್ಯುತ್ ಬಿಕ್ಕಟ್ಟು ತೀವ್ರಗೊಂಡಿದ್ದು, ರಾತ್ರಿ 8.30ರವರೆಗೆ ಮಾತ್ರ ಮಾರುಕಟ್ಟೆಗಳನ್ನು ತರೆದಿರಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ, ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಎಚ್ಚರಿಕೆ ನೀಡುತ್ತಾ, ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಶ್ರೀಲಂಕಾದೊಂದಿಗೆ ಹೋಲಿಸಿದ್ದಾರೆ. ಆಮದು ವೆಚ್ಚವನ್ನು ಕಡಿಮೆ ಮಾಡಲು ಪಾಕಿಸ್ತಾನ ಸರ್ಕಾರ, ಕಳೆದ ತಿಂಗಳು 41 ವಸ್ತುಗಳ ಆಮದನ್ನು 2 ತಿಂಗಳ ಕಾಲ ನಿಷೇಧಿಸಿತ್ತು. ಆದಾಗ್ಯೂ, ಈ ನಿರ್ಬಂಧಗಳಿಂದಾಗಿ ಆಮದು ಬಿಲ್ ನಲ್ಲಿ ಕೇವಲ 60 ಕೋಟಿ ಡಾಲರ್ ಕಡಿಮೆ ಮಾಡಿದೆ, ಇದು ಒಟ್ಟು ಆಮದು ವೆಚ್ಚದ ಶೇಕಡಾ ಐದರಷ್ಟು ಪಾಲನ್ನು ಹೊಂದಿದೆ.