"ಇದು ಯುದ್ಧದ ಯುಗವಲ್ಲ": ಪುಟಿನ್ ಗೆ ಪ್ರಧಾನಿ ಮೋದಿಯ ಸಲಹೆ ಜಿ-20 ಶೃಂಗಸಭೆಯಲ್ಲಿ ಸದ್ದು!

ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ರಷ್ಯಾ ಅಧ್ಯಕ್ಷ ಪುಟಿನ್ ಗೆ ಸಲಹೆ ನೀಡಿದ್ದಾಗ ಪ್ರಧಾನಿ ಮೋದಿ ಹೇಳಿದ್ದ ಮಾತುಗಳು ಈಗ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲೂ ಸದ್ದು ಮಾಡಿದೆ.
ಪ್ರಧಾನಿ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್
ಪ್ರಧಾನಿ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್

ಬಾಲಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ರಷ್ಯಾ ಅಧ್ಯಕ್ಷ ಪುಟಿನ್ ಗೆ ಸಲಹೆ ನೀಡಿದ್ದಾಗ ಪ್ರಧಾನಿ ಮೋದಿ ಹೇಳಿದ್ದ ಮಾತುಗಳು ಈಗ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲೂ ಸದ್ದು ಮಾಡಿದ್ದು, ಸದಸ್ಯ ರಾಷ್ಟ್ರಗಳು ರಷ್ಯಾಗೆ ನೀಡುವ ಸಲಹೆ, ಎಚ್ಚರಿಕೆಗಳಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಲು ನಿರ್ಧರಿಸಿವೆ.

ಇದು ಯುದ್ಧದ ಕಾಲವಲ್ಲ ಎಂದು ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದು ಜಿ-20 ಯ ಅಧಿಕೃತ ಹೇಳಿಕೆಗಳ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಟಿಸಿದೆ.

ಜಾಗತಿಕ ನಾಯಕರು ಪ್ರಧಾನಿ ಅವರ ಈ ಕಾಲ ಯುದ್ಧದ ಕಾಲವಲ್ಲ ಎಂಬ ಹೇಳಿಕೆಯನ್ನು ಜಿ-20 ಶೃಂಗಸಭೆಯಲ್ಲಿ ಪುನರುಚ್ಛರಿಸಲಿದ್ದು, ಕರಡು ದಾಖಲೆಯಲ್ಲಿ ಇದು ಉಲ್ಲೇಖವಾಗಿದೆ. ಇದಕ್ಕೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ವಿರೋಧಿಸಿರುವ ಎಲ್ಲಾ ರಾಯಭಾರಿಗಳೂ ಒಪ್ಪಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಮಾಹಿತಿಯುಳ್ಳ ಇಬ್ಬರು ಅಧಿಕಾರಿಗಳ ಪ್ರಕಾರ, ರಷ್ಯಾ ಆಕ್ರಮಣವನ್ನು ತೀವ್ರವಾಗಿ ಟೀಕಿಸುತ್ತಿದ್ದ ಸದಸ್ಯ ರಾಷ್ಟ್ರಗಳ ನಡುವೆ, ರಷ್ಯಾವನ್ನು ಟೀಕಿಸುವ ಮಾತು, ಶಬ್ದಗಳ ಬಗ್ಗೆ ಒಮ್ಮತ ಮೂಡುವುದಕ್ಕೆ ಭಾರತೀಯ ನಿಯೋಗ ಮಹತ್ವದ ಪಾತ್ರ ವಹಿಸಿತ್ತು.

ಇದನ್ನೂ ಓದಿ: ಭಾರತ, ಇಂಡೋನೇಷ್ಯಾ ಶ್ರೀಮಂತ ಪರಂಪರೆ ಹಂಚಿಕೊಂಡಿವೆ; ಬಾಲಿಯಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 
ಫೈನಾನ್ಷಿಯಲ್ ಟೈಮ್ಸ್ ಕರಡು ಹೇಳಿಕೆಯನ್ನು ನೋಡಿದ್ದು, ಜಿ-20 ಅಧಿಕೃತ ಹೇಳಿಕೆಯ ಕರಡು ಪ್ರತಿ ಹೀಗಿದೆ "ಬಹುತೇಕ ಸದಸ್ಯ ರಾಷ್ಟ್ರಗಳು ಉಕ್ರೇನ್ ಮೇಲಿನ ಯುದ್ಧವನ್ನು ಖಂಡಿಸಿದ್ದು, ಮನುಷ್ಯರು ಅತೀವ ನೋವು ಎದುರಿಸುವಂತಾಗಿದೆ. ಈ ನಡುವೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಬೆದರಿಕೆ ಸ್ವೀಕಾರಾರ್ಹವಲ್ಲ, ಸಂಘರ್ಷಗಳ ಶಾಂತಿಯುತ ಪರಿಹಾರ, ಬಿಕ್ಕಟ್ಟುಗಳನ್ನು ಪರಿಹರಿಸಲು ಪ್ರಯತ್ನಗಳು, ರಾಜತಾಂತ್ರಿಕತೆ ಮತ್ತು ಸಂಭಾಷಣೆ ಬಹುಮುಖ್ಯವಾದದ್ದು, "ಇಂದಿನ ಯುಗ ಯುದ್ಧದ್ದಾಗಿರಬಾರದು".

ಈ ಕರಡು ಹೇಳಿಕೆಗೆ ಎಲ್ಲಾ ದೇಶಗಳ ರಾಜತಾಂತ್ರಿಕ ಅಧಿಕಾರಿಗಳೂ ಒಪ್ಪಿಗೆ ನೀಡಿದ್ದು, ಜಿ-20 ನಾಯಕರಿಂದ ಇನ್ನಷ್ಟೇ ಸಹಿ ಆಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com