'ಉಕ್ರೇನ್‌ನಲ್ಲಿ ಕದನ ವಿರಾಮಕ್ಕೆ ಮತ್ತು ರಾಜತಾಂತ್ರಿಕತೆ ಮರಳಲು ಮಾರ್ಗ ಕಂಡುಕೊಳ್ಳಬೇಕಿದೆ': ಪಿಎಂ ನರೇಂದ್ರ ಮೋದಿ
ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಕಳೆದ ಶತಮಾನದಲ್ಲಿ, ಎರಡನೇ ವಿಶ್ವಯುದ್ಧ ಇಡೀ ವಿಶ್ವವನ್ನು ವಿನಾಶ ಮಾಡಿತು.
Published: 15th November 2022 09:32 AM | Last Updated: 15th November 2022 01:17 PM | A+A A-

ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂಡೋನೇಷಿಯಾ ರಾಜಧಾನಿ ಬಾಲಿಗೆ ಬಂದ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಇಂಡೋನೇಷಿಯಾದ ಅಧ್ಯಕ್ಷ ಜೋಕೊ ವಿಡೋಡೋ
ಬಾಲಿ(ಇಂಡೋನೇಷಿಯಾ): ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಕಳೆದ ಶತಮಾನದಲ್ಲಿ, ಎರಡನೇ ವಿಶ್ವಯುದ್ಧ ಇಡೀ ವಿಶ್ವವನ್ನು ವಿನಾಶ ಮಾಡಿತು. ಆ ನಂತರ ಅಂದಿನ ನಾಯಕರು ಶಾಂತಿ ಮಾರ್ಗ ಹಿಡಿಯಲು ಗಂಭೀರ ಪ್ರಯತ್ನ ನಡೆಸಿದರು. ಅದೇ ರೀತಿ ಇಂದು ಶಾಂತಿಮಾರ್ಗವನ್ನು ಕಂಡುಕೊಳ್ಳುವುದು ನಮ್ಮ ಸರದಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಆರಂಭಗೊಂಡಿರುವ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ, ಆಹಾರ ಮತ್ತು ಇಂಧನ ಭದ್ರತೆಯ ಕಾರ್ಯಕಾರಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, ಜಗತ್ತಿನಲ್ಲಿ ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಬಂದ ನಂತರದ ಹೊಸ ವಿಶ್ವ ಕ್ರಮವನ್ನು ರಚಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲು ತಳಮಟ್ಟದಿಂದ ಸಾಮೂಹಿಕ ಸಂಕಲ್ಪವನ್ನು ತೋರಿಸುವುದು ಅಗತ್ಯವಾಗಿದೆ ಎಂದ ಪ್ರಧಾನಿ ಮುಂದಿನ ವರ್ಷ G20 ಶೃಂಗಸಭೆಯ ಆತಿಥ್ಯ ವಹಿಸುವ ಭಾರತ ಬುದ್ಧ ಮತ್ತು ಗಾಂಧಿಯವರು ಹುಟ್ಟಿ ಬೆಳೆದ ಪವಿತ್ರ ಭೂಮಿಯಾಗಿದೆ. ಅಲ್ಲಿ ಜಿ20 ನಾಯಕರು ಮುಂದಿನ ಸಲ ಭೇಟಿಯಾದಾಗ ಜಗತ್ತಿಗೆ ಶಾಂತಿಯ ಬಲವಾದ ಸಂದೇಶವನ್ನು ಸಾರುತ್ತೇವೆ ಎಂಬ ವಿಶ್ವಾಸವಿದೆ ಎಂದರು.
At the @g20org Summit this morning, spoke at the session on Food and Energy Security. Highlighted India’s efforts to further food security for our citizens. Also spoke about the need to ensure adequate supply chains as far as food and fertilisers are concerned. pic.twitter.com/KmXkeVltQo
— Narendra Modi (@narendramodi) November 15, 2022
ಜಾಗತಿಕ ಬೆಳವಣಿಗೆಗೆ ಭಾರತದ ಇಂಧನ-ಸುರಕ್ಷತೆಯು ಸಹ ಮುಖ್ಯವಾಗಿದೆ, ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ನಾವು ಶಕ್ತಿಯ ಪೂರೈಕೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಉತ್ತೇಜಿಸಬಾರದು. ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಶುದ್ಧ ಇಂಧನ ಮತ್ತು ಪರಿಸರಕ್ಕೆ ಭಾರತ ಬದ್ಧವಾಗಿದೆ ಎಂದರು.
2030 ರ ವೇಳೆಗೆ, ನಮ್ಮ ಅರ್ಧದಷ್ಟು ವಿದ್ಯುತ್ ನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುತ್ತದೆ. ಅಂತರ್ಗತ ಇಂಧನ ಪರಿವರ್ತನೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮಯಕ್ಕೆ ಸೀಮಿತವಾದ ಮತ್ತು ಕೈಗೆಟುಕುವ ಹಣಕಾಸು ಮತ್ತು ತಂತ್ರಜ್ಞಾನದ ಸುಸ್ಥಿರ ಪೂರೈಕೆ ಅತ್ಯಗತ್ಯ ಎಂದರು.

ಇಂದು ರಸಗೊಬ್ಬರ ಕೊರತೆ ಕಂಡುಬಂದರೆ ನಾಳೆ ಆಹಾರ ಬಿಕ್ಕಟ್ಟು ಎದುರಾಗಬಹುದು. ಇದಕ್ಕೆ ಜಗತ್ತಿನಲ್ಲಿ ಪರಿಹಾರವಿಲ್ಲ. ಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪಳಿಯನ್ನು ಸ್ಥಿರವಾಗಿ ಮತ್ತು ಭದ್ರತೆಯಿಂದ ನಿರ್ವಹಿಸಲು ನಾವು ಪರಸ್ಪರ ಒಪ್ಪಂದವನ್ನು ನಿರ್ಮಿಸಬೇಕು ಎಂದರು.
ಭಾರತದಲ್ಲಿ, ಸುಸ್ಥಿರ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ. ರಾಗಿಯಂತಹ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಜನಪ್ರಿಯಗೊಳಿಸುತ್ತಿದ್ದೇವೆ. ರಾಗಿ ಜಾಗತಿಕ ಅಪೌಷ್ಟಿಕತೆ ಮತ್ತು ಹಸಿವನ್ನು ಸಹ ಪರಿಹರಿಸಬಲ್ಲದು. ನಾವೆಲ್ಲರೂ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಮುಂದಿನ ವರ್ಷ ಅತ್ಯಂತ ಉತ್ಸಾಹದಿಂದ ಆಚರಿಸಬೇಕು ಎಂದು ಜಿ20 ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಹೇಳಿದರು.