ಯು ಕೆ ಮ್ಯಾರಾಥಾನ್ ನಲ್ಲಿ ಸೀರೆ ಧರಿಸಿ 42.5 ಕಿಮೀ ಓಡಿದ ಒಡಿಯಾ ಮಹಿಳೆ!

ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿದ ಯುಕೆ ಮೂಲದ ಒಡಿಯಾ ಮಹಿಳೆಯೊಬ್ಬರು ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ 42.5 ಕಿಮೀ ಮ್ಯಾರಥಾನ್ ಓಡಿ ತನ್ನ ಸಹ ಓಟಗಾರರನ್ನು ವಿಸ್ಮಯಗೊಳಿಸಿದರು.
ಮಧುಸ್ಮಿತಾ ಜೆನಾ
ಮಧುಸ್ಮಿತಾ ಜೆನಾ

ಕೇಂದ್ರಪಾರ: ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿದ ಯುಕೆ ಮೂಲದ ಒಡಿಯಾ ಮಹಿಳೆಯೊಬ್ಬರು ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ 42.5 ಕಿಮೀ ಮ್ಯಾರಥಾನ್ ಓಡಿ ತನ್ನ ಸಹ ಓಟಗಾರರನ್ನು ವಿಸ್ಮಯಗೊಳಿಸಿದರು.

41 ವರ್ಷದ ಮಧುಸ್ಮಿತಾ ಜೆನಾ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಮ್ಯಾಂಚೆಸ್ಟರ್‌ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿರುವ ಅವರು ವಾಯುವ್ಯ ಇಂಗ್ಲೆಂಡ್ ಒಡಿಯಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದಾರೆ.

ಅವರು ಜಗತ್ತಿನಾದ್ಯಂತ ಅನೇಕ ಮ್ಯಾರಥಾನ್‌ಗಳು ಮತ್ತು ಅಲ್ಟ್ರಾ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಮಧುಸ್ಮಿತಾ ಸೀರೆ ಉಟ್ಟು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಇದೇ ಮೊದಲು. ಸೀರೆ ಉಟ್ಟುಕೊಂಡು ಮ್ಯಾರಥಾನ್ ಓಡಿದ ಏಕೈಕ ವ್ಯಕ್ತಿ ನಾನು ಎಂದಿದ್ದಾರೆ.

ಸೀರೆಯಲ್ಲಿ ತುಂಬಾ ಸಮಯ  ಓಡುವುದು ಹೆಚ್ಚು ಕಷ್ಟ. ಆದರೆ ನಾನು 4.50 ಗಂಟೆಗಳಲ್ಲಿ  ಪೂರ್ಣಗೊಳಿಸಿದ್ದು ನನಗೆ ಸಂತೋಷವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಧುಸ್ಮಿತಾ ತಿಳಿಸಿದ್ದಾರೆ

ತನ್ನ ತಾಯಿ ಮತ್ತು ಅಜ್ಜಿಯಿಂದ ಸ್ಫೂರ್ತಿ ಪಡೆದಿರುವ ಮಧುಸ್ಮಿತಾ  ದಿನನಿತ್ಯ ಸೀರೆ ಉಡುತ್ತಾರಂತೆ. ಮಹಿಳೆಯರು ಸೀರೆಯನ್ನು ಧರಿಸಿ ಓಡಲಾರರು ಎಂದು ಹಲವರು ನಂಬುತ್ತಾರೆ, ಆದರೆ ನಾನು ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿ  ಓಡುವ ಮೂಲಕ ಅದು ತಪ್ಪು ಎಂದು ಸಾಬೀತುಪಡಿಸಿದೆ ಎಂದಿದ್ದಾರೆ. ನಾನು ಯುಕೆಯಲ್ಲಿ ಬೇಸಿಗೆ ಕಾಲದಲ್ಲಿ ಸೀರೆ ಧರಿಸುತ್ತೇನೆ ಎಂದಿದ್ದಾರೆ.

ಕಳೆದ ವರ್ಷ ಒಡಿಶಾ ಸೊಸೈಟಿ ಆಫ್ ಯುಕೆ ಸಮಾವೇಶದಲ್ಲಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮಧುಸ್ಮಿತಾ ಅವರನ್ನು ಗೌರವಿಸಲಾಯಿತು. ಅವರು ಯಾವಾಗಲೂ ಹೊಸ ಸಾಹಸಗಳೊಂದಿಗೆ ನಮಗೆ ಸ್ಫೂರ್ತಿ ನೀಡುತ್ತಾರೆ ಆದರೆ ಈ ಬಾರಿ ಅವರು ಸೀರೆಯಲ್ಲಿ ಓಡುವ ಮೂಲಕ ಹೆಚ್ಚುವರಿ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಯುಕೆಯ ಇಡೀ ಒಡಿಯಾ ಸಮುದಾಯವು ಆಕೆಯ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಯುಕೆ ಶ್ರೀ ಜಗನ್ನಾಥ್ ಸೊಸೈಟಿಯ ಟ್ರಸ್ಟಿ ಮತ್ತು ಯುಕೆ ಒಡಿಶಾ ಸೊಸೈಟಿಯ ಮಾಜಿ ಕಾರ್ಯದರ್ಶಿ ಸುಕಾಂತ್ ಕುಮಾರ್ ಸಾಹು ಹೇಳಿದ್ದಾರೆ.

ಮಧುಸ್ಮಿತಾ ಅವರ ಪತಿ ಸಚಿನ್ ದಾಸ್ ಈಜಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಧುಸ್ಮಿತ ಸಾಧನೆಗಾಗಿ ಆಕೆಯ ತಂದೆ ನಿರೇಂದ್ರ ಮೋಹನ್ ಜೆನಾ ಮತ್ತು ಇಬ್ಬರು ಪುತ್ರರು ಸಂತೋಷ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com