ಭಾರತ ಯುದ್ಧದ ಲಾಭ ಪಡೆಯುವ ದೇಶವಲ್ಲ: ವಿದೇಶಾಂಗ ಸಚಿವ ಜೈಶಂಕರ್

ಭಾರತ ಯುದ್ಧದಿಂದ ಲಾಭ ಪಡೆಯುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 
ಎಸ್ ಜೈಶಂಕರ್
ಎಸ್ ಜೈಶಂಕರ್
Updated on

ನವದೆಹಲಿ: ಭಾರತ ಯುದ್ಧದಿಂದ ಲಾಭ ಪಡೆಯುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
 
ಸೈಪ್ರಸ್ ಬಳಿಕ ವಿಯೆನ್ನಾ ಪ್ರವಾಸದಲ್ಲಿರುವ ಜೈಶಂಕರ್, ಆಸ್ಟ್ರಿಯಾದ ಪತ್ರಿಕೆಯೊಂದಿಗೆ ಸಂವಹನ ನಡೆಸಿದ್ದು, ರಾಜಕೀಯವಾಗಿ ಹಾಗೂ ಲೆಕ್ಕಾಚಾರದ ದೃಷ್ಟಿಯಿಂದ ಭಾರತ ಯುದ್ಧದಿಂದ ಲಾಭ ಮಾಡಿಕೊಳ್ಳುವ ದೇಶ ಎಂಬುದನ್ನು  ನಾನು ಬಲವಾಗಿ ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.
 
ಉಕ್ರೇನ್ ಯುದ್ಧದ ಪರಿಸ್ಥಿತಿಯಿಂದಾಗಿ ತೈಲ ಬೆಲೆಗಳು ಹೆಚ್ಚಾಗತೊಡಗಿವೆ. ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಷ್ಟ್ರಗಳಿಗಿಂತ ಉತ್ತಮ ದರದಲ್ಲಿ ತೈಲ ಪೂರಿಸುತ್ತೇವೆ ಎಂಬುವವರಿದ್ದರೆ ಕಡಿಮೆ ಹಣ ಇರುವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ವೆನಿಜ್ಯುವೆಲ್ಲಾ ಹಾಗೂ ಇರಾನ್ ಗಳ ವಿರುದ್ಧವೂ ನಿರ್ಬಂಧಗಳಿವೆ ಇಂತಹ ಸ್ಥಿತಿಯಲ್ಲಿ ಅತ್ಯುತ್ತಮ ಆಯ್ಕೆ ಮಾಡಿಕೊಳ್ಳುವುದು ರಾಜತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಯಲ್ಲಿ ಸಹಜವಾದದ್ದು, ಕಡಿಮೆ ಕೊಡುವ ಅವಕಾಶವಿದ್ದರೂ ಹೆಚ್ಚಿನ ಹಣ ನೀಡಿ ಯುರೋಪ್ ತೈಲ ಖರೀದಿಸುತ್ತದೆಯೇ? ಎಂದು ಜೈಶಂಕರ್ ಪ್ರಶ್ನಿಸಿದ್ದಾರೆ.

ಉಕ್ರೇನ್ ವಿರುದ್ಧ ಯುದ್ಧ ಪ್ರಾರಂಭವಾದ ಬಳಿಕ ಯುರೋಪ್ ರಷ್ಯಾದಿಂದಲೇ 120 ಬಿಲಿಯನ್ ಡಾಲರ್ ಮೊತ್ತದ ಇಂಧನವನ್ನು ಖರೀದಿಸಿದೆ. ಇದು ಭಾರತ ಖರೀದಿಸಿದ್ದಕ್ಕಿಂತಲೂ 6 ಪಟ್ಟು ಹೆಚ್ಚಳವಾದದ್ದಾಗಿದೆ ಎಂದು ಜೈಶಂಕರ್ ಪುನರುಚ್ಛರಿಸಿದ್ದಾರೆ.
 
ಇದೇ ವೇಳೆ ವಿಶ್ವಸಂಸ್ಥೆಯ ರಷ್ಯಾ ವಿರುದ್ಧದ ನಿರ್ಣಯವನ್ನು ಭಾರತವೇಕೆ ಬೆಂಬಲಿಸಲಿಲ್ಲ ಎಂಬ ಪ್ರಶ್ನೆಗೂ ಜೈಶಂಕರ್ ಉತ್ತರಿಸಿದ್ದು,  ಉಕ್ರೇನ್ ನಲ್ಲಿ ನಡೆದಿದ್ದು ಯುರೋಪ್ ಗೆ ಹೆಚ್ಚು ಹತ್ತಿರವಾಗಿತ್ತು. ಯುರೋಪ್- ರಷ್ಯಾ ಇತಿಹಾಸ ಭಾರತ-ರಷ್ಯಾ ಇತಿಹಾಸಕ್ಕಿಂತಲೂ ಭಿನ್ನವಾಗಿದೆ. ನಮಗೆ ಯುರೋಪ್ ಗಿಂತಲೂ ಭಿನ್ನವಾದ ಹಿತಾಸಕ್ತಿಗಳು ಉಕ್ರೇನ್ ವಿಷಯದಲ್ಲಿದೆ. ವಿಶ್ವಸಂಸ್ಥೆಯ ನೀತಿಗಳನ್ನು ಎಲ್ಲರೂ ಪಾಲಿಸುವುದಾಗಿ ಎಲ್ಲಾ ದೇಶಗಳೂ ಹೇಳಿಕೊಳ್ಳುತ್ತವೆ. ಆದರೆ 75 ವರ್ಷಗಳ ಇತಿಹಾಸವನ್ನು ನೋಡಿದರೆ, ಎಲ್ಲಾ ಸದಸ್ಯ ರಾಷ್ಟ್ರಗಳೂ ವಿಶ್ವಸಂಸ್ಥೆಯ ಚಾರ್ಟರ್ ನ್ನು ಪಾಲನೆ ಮಾಡಿ ಬೇರೆ ರಾಷ್ಟ್ರಗಳಿಗೆ ಸೇನೆಯನ್ನೇ ಕಳಿಸಿಲ್ಲವೇ?

ಪ್ರತಿಯೊಂದು ರಾಷ್ಟ್ರವೂ ತನ್ನ ಪ್ರದೇಶ, ಹಿತಾಸಕ್ತಿ, ಇತಿಹಾಸದ ಪ್ರಕಾರ ಘಟನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತವೆ. ಯುರೋಪ್ ಅಥವಾ ಲ್ಯಾಟಿನ್ ಅಮೇರಿಕಾದಲ್ಲಿರುವ ರಾಷ್ಟ್ರಗಳು ತಾವು ಯಾವುದೇ ನಿಲುವು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸುವ ಅನೇಕ ಘಟನೆಗಳು ಏಷ್ಯಾದಲ್ಲೂ ನಡೆದಿದೆ.
 
ವಿಚಲಿತಗೊಳಿಸುವುದಕ್ಕಾಗಿ ನೀವು ಬೇರೆಲ್ಲೋ ನಡೆಯುತ್ತಿರುವುದರ ತಪ್ಪನ್ನು ತಕ್ಷಣವೇ ತೋರಿಸಿದರೆ, ತತ್ವಾದರ್ಶಗಳನ್ನು ತಕ್ಷಣವೇ ಮರೆತುಬಿಡಬಹುದು ಎಂದು ಹೇಳಿದ್ದಾರೆ.
 
ರಷ್ಯಾದ ತೈಲಕ್ಕೆ ಜಿ-7 ರಾಷ್ಟ್ರಗಳು ದರ ಮಿತಿ ನಿಗದಿಪಡಿಸಿರುವುದರ ವಿಷಯವಾಗಿಯೂ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ಇದು ಭಾರತದೊಂದಿಗೆ ಚರ್ಚಿಸದೇ ತೆಗೆದುಕೊಂಡ ನಿರ್ಧಾರವಾಗಿದೆ, ಪ್ರತಿಯೊಂದು ರಾಷ್ಟ್ರಕ್ಕೂ ಅವರ ನಿರ್ಧಾರಗಳನ್ನು ಮಾಡುವ ಅಧಿಕಾರವಿದೆ. ಆದರೆ ಅವರು ಮಾಡಿದ್ದನ್ನೆಲ್ಲಾ ನಾವು ಅಂಗೀಕರಿಸಬೇಕೆಂಬುದೇನೂ ಇಲ್ಲ ಎಂದು ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com