ಗಾಜಾಪಟ್ಟಿ: ಇಸ್ರೇಲಿ ವೈಮಾನಿಕ ದಾಳಿಯ ಸಮಯದಲ್ಲಿ ಹಮಾಸ್‌ನ ಹಿರಿಯ ಕಮಾಂಡರ್ ರೊಬ್ಬರು ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ನುಖ್ಬಾ ಘಟಕದ ದಕ್ಷಿಣ ಖಾನ್ ಯೂನಿಸ್ ಬೆಟಾಲಿಯನ್ ಎಂದು ಕರೆಯಲ್ಪಡುವ ಕಮಾಂಡರ್ ಬಿಲ್ಲಾಲ್ ಅಲ್-ಖೆದ್ರಾ ಅವರನ್ನು ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ನಿರ್ದೇಶನಾಲಯದ ಗುಪ್ತಚರ ಪ್ರಯತ್ನಗಳ ನಂತರ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ.
ಈತ ಕಳೆದ ವಾರಾಂತ್ಯದಲ್ಲಿ ನಿರಿಮ್ ಮತ್ತು ನಿರ್ ಓಝ್ ದಕ್ಷಿಣ ಸಮುದಾಯಗಳ ಮೇಲೆ ದಾಳಿಯ ನೇತೃತ್ವ ವಹಿಸಿದ್ದ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಕಿಬ್ಬುಟ್ಜ್ ನಿರಿಮ್ ಮತ್ತು ನಿರ್ ಓಜ್‌ನಲ್ಲಿನ ಬರ್ಬರ ದಾಳಿಗೆ ಆತ ಕಾರಣನಾಗಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆ ಮಾಹಿತಿ ನೀಡಿದೆ. ಗಾಜಾ ಪಟ್ಟಿಯಲ್ಲಿ ರಾತ್ರಿಯಿಡೀ ನಡೆದ ವೈಮಾನಿಕ ದಾಳಿಯಲ್ಲಿ ಇನ್ನೂ ಹಲವಾರು ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಹಮಾಸ್ ಕಮಾಂಡ್ ಕೇಂದ್ರಗಳು, ಮಿಲಿಟರಿ ಕಾಂಪೌಂಡ್ ಗಳು, ರಾಕೆಟ್ ಲಾಂಚರ್ ಗಳು, ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣಾ ಪೋಸ್ಟ್‌ಗಳು ಮತ್ತು ವೀಕ್ಷಣಾ ಪೋಸ್ಟ್‌ಗಳು ಸೇರಿದಂತೆ 100 ಕ್ಕೂ ಹೆಚ್ಚು ಕಡೆಗಳಲ್ಲಿ ಇಸ್ರೇಲ್ ರಕ್ಷಣಾ ಪಡೆ ಭಾನುವಾರ ರಾತ್ರಿಯಿಡೀ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
Advertisement