ಹಣದುಬ್ಬರ ಬಿಕ್ಕಟ್ಟು 50 ವರ್ಷಗಳಲ್ಲೇ ಗರಿಷ್ಠ: ಬರಗಾಲದಂತಹ ಸ್ಥಿತಿಯಲ್ಲಿ ನರಳುತ್ತಿದೆ ಪಾಕ್!
ಪಾಕಿಸ್ತಾನದಲ್ಲಿ ಮಾರ್ಚ್ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕಹಾಕಲಾಗುವ ಹಣದುಬ್ಬರ ಶೇ.35.37 ರಷ್ಟು ತಲುಪಿದ್ದು, 50 ವರ್ಷಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಹಣದುಬ್ಬರ ಬಿಕ್ಕಟ್ಟು ಎದುರಾಗಿದೆ.
Published: 01st April 2023 05:05 PM | Last Updated: 01st April 2023 05:54 PM | A+A A-

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಾರ್ಚ್ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕಹಾಕಲಾಗುವ ಹಣದುಬ್ಬರ ಶೇ.35.37 ರಷ್ಟು ತಲುಪಿದ್ದು, 50 ವರ್ಷಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಹಣದುಬ್ಬರ ಬಿಕ್ಕಟ್ಟು ಎದುರಾಗಿದೆ.
ದೇಶಕ್ಕೆ ಅತ್ಯಗತ್ಯವಾಗಿದ್ದ ಬೇಲ್ಔಟ್ ಸಿಗುವುದಕ್ಕೆ ಐಎಂಎಫ್ ನ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ತಿಂಗಳಿನಿಂದ ತಿಂಗಳಿಗೆ ಲೆಕ್ಕ ಹಾಕಲಾಗುವ ಹಣದುಬ್ಬರ ಶೇ.3.72 ರಷ್ಟಿದ್ದು, ಆದರೆ ಕಳೆದ ವರ್ಷದ ಸರಾಸರಿ ಹಣದುಬ್ಬರ ದರ ಶೇ. 27.26 ರಷ್ಟಿತ್ತು.
ಜಾಗತಿಕ ಇಂಧನ ಬಿಕ್ಕಟ್ಟು ಮತ್ತು 2022 ರಲ್ಲಿ ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದ ವಿನಾಶಕಾರಿ ಪ್ರವಾಹ. ವರ್ಷಗಳ ಆರ್ಥಿಕ ದುರುಪಯೋಗ ಮತ್ತು ರಾಜಕೀಯ ಅಸ್ಥಿರತೆಯ ಪರಿಣಾಮಗಳಿಂದಾಗಿ ಪಾಕಿಸ್ತಾನದ ಆರ್ಥಿಕತೆ ಕುಸಿತದ ಅಂಚಿಗೆ ತಲುಪಿದೆ.
ಇದನ್ನೂ ಓದಿ: 'ಐಪಿಎಲ್ ನಲ್ಲಿ ಆಡಲು ಪಾಕ್ ಆಟಗಾರರಿಗೆ ಅವಕಾಶ ನೀಡದಿದ್ದರೆ...'; ಬಿಸಿಸಿಐ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ
ಈಗಿರುವ ಸಾಲವನ್ನು ತೀರಿಸುವುದಕ್ಕೆ ಪಾಕ್ ಗೆ ಶತಕೋಟಿ ಡಾಲರ್ ಹಣಕಾಸು ಅಗತ್ಯವಿದೆ, ಆದರೆ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗಿದೆ ಮತ್ತು ಅಲ್ಲಿನ ರೂಪಾಯಿ ಮೌಲ್ಯ ಕುಸಿಯುತ್ತಿದೆ.
ಬಡ ಪಾಕಿಸ್ತಾನಿಗಳು ಆರ್ಥಿಕ ಪ್ರಕ್ಷುಬ್ಧತೆಯ ತೀವ್ರತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಮುಸ್ಲಿಂ ಉಪವಾಸದ ತಿಂಗಳ ರಂಜಾನ್ ಪ್ರಾರಂಭವಾದಾಗಿನಿಂದ ಆಹಾರ ವಿತರಣಾ ಕೇಂದ್ರಗಳಲ್ಲಿ ಗುಂಪು ಘರ್ಷಣೆಗಳಲ್ಲಿ, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ.
"ಹಣದುಬ್ಬರವು ಏರುತ್ತಿರುವ ರೀತಿಯಲ್ಲಿ, ಕ್ಷಾಮದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕರಾಚಿ ಮೂಲದ ವಿಶ್ಲೇಷಕ ಶಾಹಿದಾ ವಿಜಾರತ್ ಹೇಳಿದ್ದಾರೆ.
ಪಾಕಿಸ್ತಾನದ ದಕ್ಷಿಣ ನಗರವಾದ ಕರಾಚಿಯ ಕಾರ್ಖಾನೆಯೊಂದರಲ್ಲಿ ರಂಜಾನ್ ವೇಳೆ ನಡೆಯುವ ದಾನ ವಿತರಣೆ ಕಾರ್ಯಕ್ರಮದಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ.