
ಶ್ವೇತ ಭವನದ ಅಧಿಕಾರಿಗಳು
ವಾಷಿಂಗ್ ಟನ್: ಅಮೇರಿಕಾದ ಸೇನಾ ಫೈಟರ್ ಜೆಟ್ ಅಲಾಸ್ಕಾ ಕರಾವಳಿ ಪ್ರದೇಶದಲ್ಲಿ ಹಾರಾಡುತ್ತಿದ್ದ ಅಜ್ಞಾತ ವಸ್ತುವೊಂದನ್ನು ಹೊಡೆದುರುಳಿಸಿದೆ.
ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಆದೇಶದ ಮೇರೆಗೆ ಸೇನಾ ಫೈಟರ್ ಕಾರ್ಯಾಚರಣೆ ನಡೆದಿದೆ ಎಂದು ಶ್ವೇತ ಭವನ ತಿಳಿಸಿದೆ.
ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೇ ಈ ಬಗ್ಗೆ ಮಾತನಾಡಿದ್ದು, ಸುಮಾರು 40,000 ಅಡಿಗಳ (13,000 ಮೀಟರ್) ಎತ್ತರದಲ್ಲಿ ಹಾರಾಡುತ್ತಿದ್ದ ಆ ಅಜ್ಞಾತ ವಸ್ತು, ಪ್ರಯಾಣಿಕ ವಿಮಾನಗಳಿಗೆ ಅಪಾಯವೊಡ್ಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ಹೊಡೆದುರುಳಿಸಲಾಗಿದೆ. ಬದಲಾಗಿ ಅದು ಕಣ್ಗಾವಲಿನ ಕೆಲಸದಲ್ಲಿತ್ತು ಎಂಬ ಕಾರಣಕ್ಕಾಗಿ ಅಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮಿತ್ರ ದೇಶಗಳ ವಿರುದ್ಧ ಚೀನಾ ಹಕ್ಕು ಪ್ರತಿಪಾದನೆ ಮಾಡುತ್ತಿದೆ: ಅಮೇರಿಕಾ ಕಿಡಿ
ವಾಣಿಜ್ಯ ವಿಮಾನಗಳು ಹಾಗೂ ಖಾಸಗಿ ಜೆಟ್ ಗಳು 45,000 ಅಡಿ (13,700 ಮೀಟರ್) ಗಳಷ್ಟು ಮೇಲೆ ಹಾರಬಹುದಾಗಿದೆ.
ಆ ಅಜ್ಞಾತ ವಸ್ತು ಸಣ್ಣ ಕಾರಿನ ಗಾತ್ರದಲ್ಲಿತ್ತು, ಆದರೆ ಅದು ಚೀನಾದ ಶಂಕಿತ ಸ್ಪೈ ಬಲೂನ್ ಗಿಂತಲೂ ಕಡಿಮೆ ಗಾತ್ರದಲ್ಲಿತ್ತು ಇದನ್ನು ವಾಯಡೆಯ ಫೈಟರ್ ಜೆಟ್ ಗಳು ದಕ್ಷಿಣ ಕೆರೊಲಿನಾದಲ್ಲಿನ ಕರಾವಳಿ ಪ್ರದೇಶದ ಬಳಿ ಹೊಡೆದುರುಳಿಸಿದೆ ಎಂದು ಕಿರ್ಬೇ ತಿಳಿಸಿದ್ದಾರೆ.
ಈ ಘಟನೆ ಚೀನಾದ ಕಣ್ಗಾವಲು ಯೋಜನೆ ಬಗ್ಗೆ ಆತಂಕಗಳನ್ನು ಹೆಚ್ಚಿಸಿದ್ದು, ಇದರ ವಿರುದ್ಧ ಕಠಿಣ ನಿಲುವು ತಳೆಯುವಂತೆ ಸಾರ್ವಜನಿಕರಿಂದ ಬೈಡನ್ ಆಡಳಿತದ ಮೇಲೆ ಒತ್ತಡ ಹೆಚ್ಚಿದೆ. ಇಂಥಹದ್ದೇ ಎರಡು ಪ್ರತ್ಯೇಕ ಪ್ರಕರಣಗಳಲ್ಲಿನ ವ್ಯತ್ಯಾಸಗಳನ್ನು ಶ್ವೇತಭವನ ಗುರುತಿಸಿದೆ. ಇತ್ತೀಚಿನ ಘಟನೆಯಲ್ಲಿ ಆ ಅಜ್ಞಾತ ವಸ್ತು ಕಣ್ಗಾವಲು ಉಪಕರಣ ಹೊಂದಿತ್ತೇ ಇಲ್ಲವೇ, ಅದು ಎಲ್ಲಿಂದ ಬಂದಿತ್ತು? ಅದರ ಉದ್ದೇಶಗಳೇನು ಎಂಬುದನ್ನು ಹೇಳುವುದಕ್ಕೆ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.
ಶುಕ್ರವಾರದಂದು ಪೆಂಟಗನ್ ಆ ಅಜ್ಞಾತ ವಸ್ತುವಿನ ವಿವರಣೆ ನೀಡಲು ನಿರಾಕರಿಸಿದೆ. ಅಮೇರಿಕಾದ ಪೈಲಟ್ ಗಳು ಅದನ್ನು ಗಮನಿಸಲು ಅದರ ಸನಿಹಕ್ಕೆ ತೆರಳಿದ್ದರು ಆದರೆ ಅದು ಮಾನವ ಸಹಿತವಾಗಿದ್ದಂತೆ ಕಾಣಲಿಲ್ಲ. ಕಳೆದ ವಾರ ಕಂಡುಬಂದಿದ್ದ ಬಲೂನ್ ಗಿಂತಲೂ ಈಗ ಪತ್ತೆಯಾಗಿರುವ ಆ ಅಜ್ಞಾತ ವಸ್ತು ಸಣ್ಣದಾಗಿತ್ತು, ಕಡಿಮೆ ಎತ್ತರದಲ್ಲಿ ಹಾರುತ್ತಿತ್ತು ಎಂದು ಶ್ವೇತ ಭವನ ಹೇಳಿದೆ.