
ಶ್ರೀಲಂಕಾ ಅಧ್ಯಕ್ಷ ರನೀಲ್ ವಿಕ್ರಮ ಸಿಂಘೆ
ಕೊಲಂಬೋ: ಆರ್ಥಿಕ ದಿವಾಳಿತನಕ್ಕೊಳಗಾಗಿರುವ ಶ್ರೀಲಂಕಾ, ಮತಪತ್ರಗಳ ಮುದ್ರಣಕ್ಕೆ ಹಣವಿಲ್ಲದೇ ಚುನಾವಣೆಯನ್ನು ಮುಂದೂಡಿದೆ.
ಮುಂದಿನ ತಿಂಗಳು ನಿಗದಿಯಾಗಿದ್ದ ಸ್ಥಳೀಯ ಚುನಾವಣೆಯನ್ನು ಮುಂದೂಡಿರುವ ಕ್ರಮವನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದು, ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಯಿತು.
ಮಾ.09 ರಂದು ನಡೆಯಬೇಕಿದ್ದ ಚುನಾವಣೆಯನ್ನು ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಅವರಿಗೆ ಸತ್ವಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಶ್ರೀಲಂಕಾದ ಆರ್ಥಿಕ ಸ್ಥಿತಿ ತೀವ್ರ ಕುಸಿತ ಎದುರಿಸಿದ್ದಾಗ ಜುಲೈ ನಲಿ ವಿಕ್ರಮಸಿಂಘೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಚುನಾವಣಾ ಆಯೋಗ ಕೋರ್ಟ್ ಗೆ ನೀಡಿರುವ ಮಾಹಿತಿಯ ಪ್ರಕಾರ, ಮತಪತ್ರಗಳ ಮುದ್ರಣ, ಇಂಧನ ಅಥವಾ ಮತಗಟ್ಟೆಗಳಿಗೆ ಪೊಲೀಸ್ ರಕ್ಷಣೆಗೆ ಹಣವನ್ನು ಬಿಡುಗಡೆ ಮಾಡಲು ಖಜಾನೆ ನಿರಾಕರಿಸಿದೆ.
ಇದನ್ನೂ ಓದಿ: ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ: ರಕ್ಷಣಾ ಸಚಿವರ ಘೋಷಣೆ
"ಇತ್ತೀಚೆಗೆ ನಾನು ನಿಗದಿತ ಸಮಯದಲ್ಲೇ ಚುನಾವಣೆ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದೆ, ಆದರೆ ಸರ್ಕಾರ ಅಗತ್ಯವಿರುವ ಅನುದಾನಗಳನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯವಿಲ್ಲದ ಕಾರಣ ಚುನಾವಣೆ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಗೆ ತಿಳಿಸಲಾಗುವುದು" ಎಂದು ಚುನಾವಣಾ ಆಯೋಗದ ಮುಖ್ಯಸ್ಥ ನಿಮಲ್ ಪಂಚಿಹೇವಾ ತಿಳಿಸಿದ್ದಾರೆ.
ಸರ್ಕಾರದ ಆದಾಯ ವೇತನ ನೀಡುವುದಕ್ಕೆ, ಪಿಂಚಣಿ ನೀಡುವುದಕ್ಕೆ ಹಾಗೂ ಅಗತ್ಯ ಸೇವೆಗಳನ್ನು ನಿರ್ವಹಿಸುವುದಕ್ಕೆ ಸಾಕಾಗುತ್ತಿಲ್ಲ ಆದ್ದರಿಂದ ಚುನಾವಣೆ ಸಾಧ್ಯವಿಲ್ಲ ಎಂದು ಅಧ್ಯಕ್ಷರು ಈ ಹಿಂದೆ ಹೇಳಿದ್ದರು. ಗೋಟಬಯಾ ರಾಜಪಕ್ಸ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ವಿಕ್ರಮಸಿಂಘೆ, ಐಎಂಎಫ್ ನಿಂದ ಆರ್ಥಿಕ ನೆರವು ಪಡೆಯುವುದಕ್ಕೆ ತೆರಿಗೆ ಏರಿಕೆ ಹಾಗೂ ಬೆಲೆ ಏರಿಕೆಗೆ ಮುಂದಾಗಿದ್ದರು.