ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ: ನ್ಯೂಜಿಲೆಂಡ್ ಪಿಎಂ ಜಸಿಂಡಾ ಅರ್ಡೆರ್ನ್ ಪ್ರಧಾನಿ ಹುದ್ದೆಗೆ ದಿಢೀರ್ ರಾಜಿನಾಮೆ ಘೋಷಣೆ

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಸಭೆಯಲ್ಲಿ ಘೋಷಿಸಿದ್ದಾರೆ.
ಜಸಿಂಡಾ ಅರ್ಡೆರ್ನ್
ಜಸಿಂಡಾ ಅರ್ಡೆರ್ನ್

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಸಭೆಯಲ್ಲಿ ಘೋಷಿಸಿದ್ದಾರೆ.

ಮುಂದಿನ ತಿಂಗಳು ಅಂದರೆ ಫೆಬ್ರವರಿ 2023 ರಿಂದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ಗುರುವಾರ ಘೋಷಿಸಿದ್ದಾರೆ. ನನಗೆ ಇದೇ ಸರಿಯಾದ ಸಮಯ. ನಾನು ಇನ್ನೂ 4 ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿ ಹೇಳಿದರು.

ದೊಡ್ಡ ಜವಾಬ್ದಾರಿ ಇರುವ ಉನ್ನತ ಹುದ್ದೆಯನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಧಾನಿ ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ. 42 ವರ್ಷ ವಯಸ್ಸಿನ ಪ್ರಧಾನಿಯೊಬ್ಬರು ಇಷ್ಟು ಬೇಗ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿರುವುದು ನಿಜಕ್ಕೂ ಅಚ್ಚರಿದಾಯಕ ವಿಚಾರ.  

ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುತ್ತಿಲ್ಲ ಎಂದು ಜಸಿಂಡಾ ಅವರು ದಿಢೀರ್ ನಿರ್ಧಾರ ಪ್ರಕಟಿಸಿದ್ದು, ಪಕ್ಷದಲ್ಲಿ ಅಚ್ಚರಿಗೆ ಕಾರಣವಾಗಿದೆ. ಇದೊಂದು ದೊಡ್ಡ ಮತ್ತು ಅತ್ಯಂತ ಹೆಚ್ಚಿನ ಜವಾಬ್ದಾರಿಯುವ ಹುದ್ದೆಯಾಗಿದೆ. ಅದನ್ನು ನಿರ್ವಹಿಸುವುದು ಕೂಡ ಸುಲಭವಲ್ಲ. ಅಂತಹ ಹುದ್ದೆಗೆ ಸೂಕ್ತ ವ್ಯಕ್ತಿ ಇದ್ದರೆ ಚೆನ್ನ. ನನಗೆ ಪ್ರಧಾನಿ ಹುದ್ದೆ ನಿಭಾಯಿಸಲು, ಪದವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಸಿಂಡಾ ಹೇಳಿಕೆ ನೀಡಿದ್ದಾರೆ.

2017 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ  ಪ್ರಧಾನ ಮಂತ್ರಿಯಾದ  ಜಸಿಂಡಾ ಅರ್ಡೆರ್ನ್,  ನಂತರ ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ತಮ್ಮ ಆಡಳಿತಾರೂಢ ಲೇಬರ್ ಪಕ್ಷವನ್ನು ಭಾರಿ ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, ಇತ್ತೀಚಿನ ಸಮೀಕ್ಷೆಗಳಲ್ಲಿ ಅವರ ಪಕ್ಷ ಮತ್ತು ಜಸಿಂಡಾ ಅರ್ಡೆರ್ನ್ ಅವರ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com