ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಪ್ರಮುಖ ನಗರಗಳು ಕತ್ತಲಲ್ಲಿ; ಮಧ್ಯದಲ್ಲೇ ನಿಂತ ಮೆಟ್ರೋ ಸಂಚಾರ
ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಪಾಕಿಸ್ತಾನ ಇದೀಗ ನಿಜಕ್ಕೂ ಕತ್ತಲಲ್ಲಿ ಮುಳುಗಿದೆ. ಮೊದಲು ದೇಶದಲ್ಲಿ ಗೋದಿ ಹಿಟ್ಟು ಖಾಲಿಯಾಯಿತು. ನಂತರ ಗ್ಯಾಸ್ ಮತ್ತು ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಈಗ ವಿದ್ಯುತ್ ಸರದಿ.
Published: 23rd January 2023 03:10 PM | Last Updated: 23rd January 2023 04:26 PM | A+A A-

ಪ್ರತ್ಯಕ್ಷ ದೃಶ್ಯ
ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಪಾಕಿಸ್ತಾನ ಇದೀಗ ನಿಜಕ್ಕೂ ಕತ್ತಲಲ್ಲಿ ಮುಳುಗಿದೆ. ಮೊದಲು ದೇಶದಲ್ಲಿ ಗೋದಿ ಹಿಟ್ಟು ಖಾಲಿಯಾಯಿತು. ನಂತರ ಗ್ಯಾಸ್ ಮತ್ತು ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಈಗ ವಿದ್ಯುತ್ ಸರದಿ.
ಸೋಮವಾರ ಬೆಳಗ್ಗೆಯಿಂದಲೇ ಪಾಕಿಸ್ತಾನದ ಬಹುಭಾಗ ಕತ್ತಲೆಯಲ್ಲಿ ಮುಳುಗಿದೆ. ಕ್ವೆಟ್ಟಾ ಮತ್ತು ಗುಡ್ಡು ನಡುವಿನ ಹೈ-ಟೆನ್ಷನ್ ಟ್ರಾನ್ಸ್‌ಮಿಷನ್ ಲೈನ್‌ನಲ್ಲಿನ ದೋಷದಿಂದಾಗಿ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಿದೆ. ಪಾಕಿಸ್ತಾನ ಈಗಾಗಲೇ ವಿದ್ಯುತ್ ಕೊರತೆ ಮತ್ತು ದೀರ್ಘ ಕಡಿತವನ್ನು ಎದುರಿಸುತ್ತಿದೆ. ವಿದ್ಯುತ್ ಉಳಿತಾಯಕ್ಕಾಗಿ ಮಾರುಕಟ್ಟೆಗಳನ್ನು 8 ಗಂಟೆಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ.
'ದುನಿಯಾ ನ್ಯೂಸ್' ಪ್ರಕಾರ, ಕ್ವೆಟ್ಟಾ, ಇಸ್ಲಾಮಾಬಾದ್, ಲಾಹೋರ್ ಸೇರಿದಂತೆ ಬಲೂಚಿಸ್ತಾನದ 22 ಜಿಲ್ಲೆಗಳು, ಮುಲ್ತಾನ್ ಪ್ರದೇಶದ ನಗರಗಳು ಮತ್ತು ಕರಾಚಿಯಂತಹ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಲಾಹೋರ್‌ನ ಮಾಲ್ ರೋಡ್, ಕೆನಾಲ್ ರಸ್ತೆ ಮತ್ತು ಇತರ ಪ್ರದೇಶಗಳಲ್ಲಿ ಜನರು ವಿದ್ಯುತ್ ಕಡಿತದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಪ್ರಸರಣ ಮಾರ್ಗಗಳಲ್ಲಿನ ತಾಂತ್ರಿಕ ದೋಷಗಳು ಸಿಂಧ್, ಖೈಬರ್ ಪಖ್ತುಂಖ್ವಾ, ಪಂಜಾಬ್ ಮತ್ತು ರಾಜಧಾನಿಯಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವಾಗಿವೆ.
ಇದನ್ನೂ ಓದಿ: 'ಭಾರತದೊಂದಿಗಿನ ಮೂರು ಯುದ್ಧಗಳಿಂದಾಗಿ...', ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಬೆಳಗ್ಗೆ 7:34ಕ್ಕೆ ರಾಷ್ಟ್ರೀಯ ಗ್ರಿಡ್‌ನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವಿದ್ಯುತ್ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ವಿದ್ಯುತ್ ವ್ಯತ್ಯಯದಿಂದ ಮೆಟ್ರೋ ಸೇವೆಗೂ ತೊಂದರೆಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿಯ 117 ಗ್ರಿಡ್ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಕೂಡ ಸ್ಥಗಿತಗೊಂಡಿತು, ಇಡೀ ನಗರ ಮತ್ತು ರಾವಲ್ಪಿಂಡಿ ಕತ್ತಲೆಯಲ್ಲಿ ಮುಳುಗಿತು. ಮತ್ತೆ ವಿದ್ಯುತ್ ಬರಲು ಹಲವು ಗಂಟೆಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
Power breakdown in #Pakistan, Orange train service stopped, Trains halted at places in Beach track, Passengers were trapped inside the train.#poweroutage #PakistanEconomy #Pakistani #Blackout #Lahore pic.twitter.com/TX0CvYrmgU
— Chaudhary Parvez (@ChaudharyParvez) January 23, 2023
ಪಾಕಿಸ್ತಾನದ ವಿವಿಧ ಪ್ರದೇಶಗಳ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯುತ್ ವೈಫಲ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಕತ್ತಲೆಯಲ್ಲಿ ಮುಳುಗಿರುವ ಪಾಕಿಸ್ತಾನ ಈಗಾಗಲೇ ಹಲವು ಸಂಕಷ್ಟಗಳ ಗಾಢ ಕತ್ತಲೆಯಲ್ಲಿ ಮುಳುಗಿದೆ. ದೇಶದಲ್ಲಿ ಗೋಧಿ ಬೆಳೆ ನಾಶವಾದ ನಂತರ ಹಿಟ್ಟು ತುಂಬಾ ದುಬಾರಿಯಾಗಿದೆ. ಹಿಟ್ಟು ಮಾತ್ರವಲ್ಲದೆ ಬೇಳೆಕಾಳು, ಎಣ್ಣೆ ಖರೀದಿಗೂ ಜನ ಪರದಾಡುತ್ತಿದ್ದಾರೆ. ಹಲವು ತಿಂಗಳಿಂದ ವಿದ್ಯುತ್ ಪೂರೈಕೆ ಹದಗೆಟ್ಟಿದೆ. ಸುದೀರ್ಘ ವಿದ್ಯುತ್ ಕಡಿತವನ್ನು ತಪ್ಪಿಸಲು ಮತ್ತು ವಿದ್ಯುತ್ ಕೊರತೆಯನ್ನು ಎದುರಿಸಲು ಪಾಕಿಸ್ತಾನ ಸರ್ಕಾರವು ಮಾರುಕಟ್ಟೆಗಳನ್ನು ರಾತ್ರಿ 8 ಗಂಟೆಗೆ ಮುಚ್ಚಲು ಆದೇಶಿಸಿದೆ.