ಬ್ರಿಟನ್ ಕೋರ್ಟ್ ಗೆ ಪಾವತಿ ಮಾಡಲು ಹಣವಿಲ್ಲ: ನೀರವ್ ಮೋದಿ
ಬ್ಯಾಂಕ್ ಸಾಲ ಮರುಪಾವತಿಸಲಾಗದೇ ಪಲಾಯನಗೈದ ವಜ್ರದ ವ್ಯಾಪಾರಿ ನೀರವ್ ಮೋದಿ ತನ್ನ ಬಳಿ ಬ್ರಿಟನ್ ಕೋರ್ಟ್ ಗೆ ಕಾನೂನು ವೆಚ್ಚಗಳನ್ನು (150,000 ಪೌಂಡ್) ಗಳನ್ನು ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Published: 11th March 2023 01:52 AM | Last Updated: 11th March 2023 03:54 PM | A+A A-

ನೀರವ್ ಮೋದಿ
ಲಂಡನ್: ಬ್ಯಾಂಕ್ ಸಾಲ ಮರುಪಾವತಿಸಲಾಗದೇ ಪಲಾಯನಗೈದ ವಜ್ರದ ವ್ಯಾಪಾರಿ ನೀರವ್ ಮೋದಿ ತನ್ನ ಬಳಿ ಬ್ರಿಟನ್ ಕೋರ್ಟ್ ಗೆ ಕಾನೂನು ವೆಚ್ಚಗಳನ್ನು (150,000 ಪೌಂಡ್) ಗಳನ್ನು ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
2 ಬಿಲಿಯನ್ ಡಾಲರ್ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುವುದರ ವಿರುದ್ಧದ ಕಾನೂನು ಹೋರಾಟದಲ್ಲಿ ನೀರವ್ ಮೋದಿ ಪರಾಭವಗೊಂಡಿದ್ದರು. ಆದರೆ ಆತನ ಪ್ರಕರಣವನ್ನು ಈಗ ಬಾಕಿ ಇರುವ ದಾವೆ ಎಂದು ಪರಿಗಣಿಸಲಾಗಿದೆ. ಈ ಮಧ್ಯೆ ನೀರವ್ ಮೋದಿ ನೈಋತ್ಯ ಲಂಡನ್ ನಲ್ಲಿರುವ ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ. ಇನ್ನು ಕಾನೂನು ವೆಚ್ಚ, ದಂಡಗಳನ್ನು ಪಾವತಿಸದೇ ಇದ್ದ ಪ್ರಕರಣದಲ್ಲಿ ಆತ ವಿಚಾರಣೆಗಾಗಿ ಬಾರ್ಕಿಂಗ್‌ಸೈಡ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ವೀಡಿಯೋ ಲಿಂಕ್ ಮೂಲಕ ಹಾಜರಾಗಿದ್ದರು.
ನೀರವ್ ಮೋದಿ ಅವರ ಹಸ್ತಾಂತರದ ಮೇಲ್ಮನವಿ ಪ್ರಕ್ರಿಯೆಗಳ ಕಾನೂನು ವೆಚ್ಚಗಳು ಹಾಗೂ ದಂಡದ ಮೊತ್ತವಾಗಿ 150,247 ಪೌಂಡ್ ಗಳನ್ನು ಪಾವತಿಸಬೇಕಾಗಿದೆ.
ಇದನ್ನೂ ಓದಿ: ಭಾರತಕ್ಕೆ ಹಸ್ತಾಂತರ: ಮೇಲ್ಮನವಿ ಸಲ್ಲಿಸಲು ನೀರವ್ ಮೋದಿಗೆ ಅನುಮತಿ ನಿರಾಕರಿಸಿದ ಲಂಡನ್ ಹೈಕೋರ್ಟ್
ನ್ಯಾಯಾಲಯದ ದಂಡದ ಕಾರ್ಯವಿಧಾನದ ವಿಚಾರಣೆಯಲ್ಲಿ, ಆರು ತಿಂಗಳ ಅವಧಿಯಲ್ಲಿ ನಡೆಯುವ ಮರುಪರಿಶೀಲನಾ ವಿಚಾರಣೆಯ ಮೊದಲು ತಿಂಗಳಿಗೆ 10,000 ಪೌಂಡ್‌ಗಳನ್ನು ಪಾವತಿಸಲು ನೀರವ್ ಮೋದಿ ಅನುಮತಿ ಕೇಳಿದ್ದರು. ಅಧಿಕಾರಿಗಳ ಪ್ರಕಾರ, ಮ್ಯಾಜಿಸ್ಟ್ರೇಟ್‌ಗಳು ಅವರ ಮನವಿಯನ್ನು ಪುರಸ್ಕರಿಸಿದ್ದಾರೆ.
ತಿಂಗಳಿಗೆ ಹಣವನ್ನು ಹೇಗೆ ಹೊಂದಿಸುತ್ತೀರಿ? ಎಂಬ ಪ್ರಶ್ನೆಗೆ ನೀರವ್ ಮೋದಿ ಕೋರ್ಟ್ ಗೆ ಉತ್ತರಿಸಿದ್ದು, ಹಸ್ತಾಂತರ ಪ್ರಕ್ರಿಯೆಗಳ ಮೇಲೆ ಭಾರತದಲ್ಲಿ ಅವರ ಆಸ್ತಿಗಳನ್ನು ಜಪ್ತಿ ಮಾಡಿದ್ದರಿಂದ ಸಾಕಷ್ಟು ಹಣವನ್ನು ಹೊಂದಿಲ್ಲದ ಕಾರಣ ಹಣವನ್ನು ಸಾಲ ಪಡೆಯುತ್ತಿರುವುದಾಗಿ ನೀರವ್ ಮೋದಿ ಹೇಳಿದ್ದಾರೆ.