ಗಾಜಾದಲ್ಲಿರುವ ನೆರವಿನ ಗುಂಪುಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸ್ಟಾರ್ ಲಿಂಕ್ ಮುಂದು!
ನವದೆಹಲಿ: ಗಾಜಾದಲ್ಲಿರುವ ನೆರವಿನ ಗುಂಪುಗಳಿಗೆ ಸಂಪರ್ಕ ವ್ಯವಸ್ಥೆ ನೀಡುವುದಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮುಂದಾಗಿದ್ದಾರೆ.
ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ನೆರವು ನೀಡುವ ಸಂಸ್ಥೆಗಳಿಗೆ ತಮ್ಮ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ ಸ್ಟಾರ್ ಲಿಂಕ್ ಸಂವಹನ ಸಂಪರ್ಕ ವ್ಯವಸ್ಥೆ ನೀಡಲಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.
2.2 ಮಿಲಿಯನ್ ಜನಸಂಖ್ಯೆ ಇರುವ ಪ್ರದೇಶಕ್ಕೆ ಎಲ್ಲಾ ರೀತಿಯ ಸಂವಹನ ವ್ಯವಸ್ಥೆಯನ್ನು ಸಂಪೂರ್ಣ ಕಡಿತಗೊಳಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಅಮೇರಿಕಾದ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಹೇಳಿದ್ದ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಸ್ಕ್, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಸ್ಕ್ ಈ ಘೋಷಣೆ ಮಾಡಿದ್ದಾರೆ.
ಪತ್ರಕರ್ತರು, ವೈದ್ಯಕೀಯ ವೃತ್ತಿಪರರು, ಮಾನವೀಯ ಪ್ರಯತ್ನಗಳಲ್ಲಿ ತೊಡಗಿರುವವರು ಮತ್ತು ಮುಗ್ಧರು ಎಲ್ಲರೂ ಅಪಾಯದಲ್ಲಿದ್ದಾರೆ ಎಂದು ಗಾಜಾ ಪರಿಸ್ಥಿತಿಯ ಕುರಿತು ಒಕಾಸಿಯೊ-ಕಾರ್ಟೆಜ್ ತಮ್ಮ ಪೋಸ್ಟ್‌ನಲ್ಲಿ ಹೇಳಿ, ಯುಎಸ್ ಐತಿಹಾಸಿಕವಾಗಿ ಈ ರೀತಿಯ ನಡೆಗಳನ್ನು ಖಂಡಿಸಿದೆ ಎಂದು ಹೇಳಿದ್ದರು.
ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಸ್ಕ್, 'ಸ್ಟಾರ್‌ಲಿಂಕ್ ಗಾಜಾದಲ್ಲಿ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸಹಾಯ ಸಂಸ್ಥೆಗಳಿಗೆ ಸಂವಹನ ಸಂಪರ್ಕವನ್ನು ಕಲ್ಪಿಸಲಿದೆ' ಎಂದು ಹೇಳಿಕೆ ನೀಡಿದ್ದಾರೆ.
ಟೈಮ್ಸ್ ಆಫ್ ಇಸ್ರೇಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಇಸ್ರೇಲಿ ಬಾಂಬ್ ದಾಳಿಯ ಸಮಯದಲ್ಲಿ ಫೋನ್ ಮತ್ತು ಇಂಟರ್ನೆಟ್ ಸೇವೆಗಳು ಕುಸಿದಿದೆ. ಈ ಬಳಿಕ ಅವರು ಭೂಸೇನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದಾಗ ಗಾಜಾ ಪಟ್ಟಿಯಲ್ಲಿರುವ ತಮ್ಮ ತಂಡಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸಹಾಯ ಗುಂಪುಗಳು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ