ಢಾಕಾ: ನಾಗರಿಕ ದಂಗೆಯಲ್ಲಿ ಬೆಂದುಹೋಗಿರುವ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಲು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಗುರುವಾರ ಪ್ಯಾರಿಸ್‌ನಿಂದ ಬಾಂಗ್ಲಾದೇಶಕ್ಕೆ ಮರಳಿದ್ದಾರೆ.
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ಸಂಸತ್ತನ್ನು ವಿಸರ್ಜಿಸಿ, ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್ ಅವರನ್ನು ನೇಮಕ ಮಾಡಿದ್ದರು. ಯೂನಸ್ ಅವರು ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ನಲ್ಲಿದ್ದರು. ಅವರು ಇಂದು ದುಬೈ ಮೂಲಕ ದೇಶಕ್ಕೆ ಮರಳಿದ್ದಾರೆ.
84 ವರ್ಷದ ಯೂನಸ್ ಅವರನ್ನು ಹೊತ್ತ ಎಮಿರೇಟ್ಸ್ ವಿಮಾನವು(ಇಕೆ-582) ಸ್ಥಳೀಯ ಕಾಲಮಾನ ಮಧ್ಯಾಹ್ನ 2:10ಕ್ಕೆ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್, ಹಿರಿಯ ಅಧಿಕಾರಿಗಳು, ವಿದ್ಯಾರ್ಥಿ ಮುಖಂಡರು ಮತ್ತು ನಾಗರಿಕ ಸಮಾಜದ ಸದಸ್ಯರು ಯೂನಸ್ ಅವರನ್ನು ಸ್ವಾಗತಿಸಿದರು.
ಯುನಸ್ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಧಾನಿಯವರ ಅಧಿಕೃತ ನಿವಾಸ ಬಂಗಭಬನ್‌ಗೆ ತೆರಳಲಿದ್ದಾರೆ.
ಈ ಮಧ್ಯಂತರ ಸರ್ಕಾರವು ಒಂದು ನಿರ್ದಿಷ್ಟ ಅವಧಿಗೆ ದೇಶವನ್ನು ಮುನ್ನಡೆಸುತ್ತದೆ ಮತ್ತು ಚುನಾಯಿತ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವವರೆಗೆ ಚುನಾವಣೆಯ ಮೇಲ್ವಿಚಾರಣೆ ಮಾಡುತ್ತದೆ. ಅಧ್ಯಕ್ಷ ಮಹಮ್ಮದ್ ಶಹಾಬುದ್ದೀನ್ ನೂತನ ಸರ್ಕಾರಕ್ಕೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಸುಮಾರು 400 ಗಣ್ಯರ ಸಮ್ಮುಖದಲ್ಲಿ ಸಂಜೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಸೇನಾ ಮುಖ್ಯಸ್ಥರು ಬುಧವಾರ ತಿಳಿಸಿದ್ದಾರೆ. ಅಲ್ಲದೆ ಸದ್ಯಕ್ಕೆ ಹಂಗಾಮಿ ಸರ್ಕಾರ 15 ಸದಸ್ಯರನ್ನು ಹೊಂದಬಹುದು ಎಂದು ಅವರು ಸುಳಿವು ನೀಡಿದ್ದಾರೆ.
ಜನಾಕ್ರೋಶಕ್ಕೆ ಮಣಿದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಅವರು ಭಾರತಕ್ಕೆ ಓಡಿಬಂದಿದ್ದು, ಸದ್ಯ ದೆಹಲಿಯ ಹೊರವಲಯದ ಅಜ್ಞಾತ ಸ್ಥಳದಲ್ಲಿ ಅವರನ್ನು ಇರಿಸಲಾಗಿದೆ.
Advertisement