ಇನ್ನೂ ಸಹಜ ಸ್ಥಿತಿಗೆ ಬಾರದ ಬಾಂಗ್ಲಾದೇಶ; ಪತ್ರಕರ್ತರ ಬಂಧನ, ಹಿಂದೂ ಶಿಕ್ಷಕರ ರಾಜೀನಾಮೆಗೆ ಒತ್ತಡ
ನವದೆಹಲಿ: ಸುಮಾರು ಎರಡು ವಾರಗಳ ಹಿಂದೆ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದ್ದರೂ, ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಪತ್ರಕರ್ತರನ್ನು ಬಂಧಿಸಲಾಗುತ್ತಿದೆ ಮತ್ತು ಹಿಂದೂ ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಇದಲ್ಲದೆ, ವಿದ್ಯಾರ್ಥಿಗಳು ಜಾಗೃತ ಗುಂಪುಗಳನ್ನು ರಚಿಸಿಕೊಂಡಿದ್ದು, ತಮ್ಮನ್ನು ಹೇಗೆ ನಡೆಸಿಕೊಳ್ಳಬೇಕೆಂದು ನಾಗರಿಕರಿಗೆ ಉಪದೇಶ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಶೇಕ್ ಹಸೀನಾ ನೇತೃತ್ವದ ಆಡಳಿತಕ್ಕೆ ನಿಕಟವಾಗಿದ್ದ ಪತ್ರಕರ್ತರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತಿದೆ.
ಖಾಸಗಿ ಚಾನೆಲ್‌ನ ಮಾಜಿ ಸಂಪಾದಕ ಶಕೀಲ್ ಅಹ್ಮದ್ ಮತ್ತು ಅವರ ಪತ್ನಿ ಫರ್ಜಾನಾ ರೂಪಾ ಹಾಗೂ ಮತ್ತೊಬ್ಬ ಪತ್ರಕರ್ತರನ್ನು ಬುಧವಾರ ಫ್ರಾನ್ಸ್‌ಗೆ ತೆರಳಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಏತನ್ಮಧ್ಯೆ, ವಿವಿಧ ಶಾಲಾ-ಕಾಲೇಜುಗಳ ಸುಮಾರು 70 ಹಿಂದೂ ಶಿಕ್ಷಕರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಇವರಲ್ಲಿ ಅಜೀಂಪುರ ಸರ್ಕಾರಿ ಬಾಲಕಿಯರ ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲೆ ಗೀತಾಂಜಲಿ ಬರುವಾ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು ಮರಕ್ಕೆ ಕಟ್ಟಿ ಹಾಕಿದ್ದರು. ಸೇನೆ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಿದೆ.
ಅದೇ ರೀತಿ ಮತ್ತೊಬ್ಬ ಹಿಂದೂ ಶಿಕ್ಷಕಿ ಸೋನಾಲಿ ರಾಣಿ ದಾಸ್ ಅವರಿಗೂ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿದ್ದು, ಅವರು ಹಾಲಿ ರೆಡ್ ಕ್ರೆಸೆಂಟ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
"ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ಬಾಂಗ್ಲಾದೇಶ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಜನರು ತಮ್ಮ ಹಿಂದಿನ ದಿನಚರಿಗೆ ಮರಳಲು ಮನೆಗಳಿಂದ ಹೊರಬರುತ್ತಿದ್ದರೂ ಉದ್ವಿಗ್ನತೆ ಇದೆ" ಎಂದು ರಾಜಕೀಯ ವಿಶ್ಲೇಷಕ ಪ್ರೊಫೆಸರ್ ನಜ್ಮುಲ್ ಅಹ್ಸಾನ್ ಕಲ್ಲಿಲ್ಮುಲ್ಲಾ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.