
ಚಿಕಾಗೋ: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದರೆ ದೇಶದ ಬೆಳವಣಿಗೆ ದೃಷ್ಟಿಯಿಂದ ಹೊಸ ದಾರಿ ಹುಡುಕುವ ವಾಗ್ದಾನವನ್ನು ಕಿಕ್ಕಿರಿದು ಸೇರಿದ ಜನತೆಯ ಮುಂದೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮಾಡಿದ್ದಾರೆ.
ಇಂದು ನಿಮ್ಮೆಲ್ಲರ ಸಮ್ಮಖದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ನಿಮ್ಮ ಅನುಮೋದನೆಯನ್ನು ಸ್ವೀಕರಿಸುತ್ತೇನೆ ಎಂದು ಖುಷಿಯಿಂದ ಹೇಳಿಕೊಂಡ 59 ವರ್ಷದ ಕಮಲಾ ಹ್ಯಾರಿಸ್, "ನಮ್ಮ ಅತ್ಯುನ್ನತ ಆಕಾಂಕ್ಷೆಗಳ ಸುತ್ತಲೂ ನಮ್ಮನ್ನು ಒಂದುಗೂಡಿಸುವ ನಿಮ್ಮೆಲ್ಲರ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಬರುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ನವೆಂಬರ್ ಚುನಾವಣೆಯೊಂದಿಗೆ, ಅಮೆರಿಕನ್ನರು "ಹಿಂದಿನ ಕಹಿ, ಸಿನಿಕತೆ ಮತ್ತು ವಿಭಜಕ ಕೃತ್ಯಗಳನ್ನು ದಾಟಲು ಒಂದು ಉತ್ತಮ ಅವಕಾಶ ಹೊಂದಿದ್ದಾರೆ. ಮುಂದೆ ಹೊಸ ಮಾರ್ಗವನ್ನು ರೂಪಿಸುವ ಅವಕಾಶವಿದೆ ಎಂದು ಅವರು ಭರವಸೆ ನೀಡಿದರು.
ಒಬ್ಬ ಉದ್ಯೋಗಸ್ಥ ತಾಯಿಯ ಮಗುವಾಗಿ ತನ್ನ ವೈಯಕ್ತಿಕ ಕಥೆಯನ್ನು ಮತ್ತು ಪ್ರಾಸಿಕ್ಯೂಟರ್ ಆಗಿ ತನ್ನ ವೃತ್ತಿಜೀವನವನ್ನು ಭಾಷಣದಲ್ಲಿ ಜನರ ಮುಂದಿಟ್ಟರು. ಇದೇ ಸಂದರ್ಭದಲ್ಲಿ ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ಅವರು ಗಂಭೀರವಲ್ಲದ ಮನುಷ್ಯ. ಟ್ರಂಪ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾದರೆ ಗಂಭೀರ ಪರಿಣಾಮವನ್ನು ಅಮೆರಿಕ ಎದುರಿಸಲಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅವರ ವಿರುದ್ಧ ನೀಡುವ ತೀರ್ಪಿನಲ್ಲಿ ಅವರು ವಿನಾಯಿತಿ ಪಡೆದುಕೊಳ್ಳಲಿದ್ದಾರೆ ಎಂದರು.
ಅಮೆರಿಕದ ಯಶಸ್ಸಿಗೆ ಬಲವಾದ ಮಧ್ಯಮ ವರ್ಗ ನಿರ್ಣಾಯಕವಾಗಿದೆ. ಅವರಿಗೆ ಬಲ ತುಂಬುವುದು ನನ್ನ ಆದ್ಯತೆಯಾಗಿದೆ. ಇದು ನನ್ನ ವೈಯಕ್ತಿಕ ಆದ್ಯತೆ ಕೂಡ. ನಾನು ಮಧ್ಯಮ ವರ್ಗದಿಂದಲೇ ಬಂದವಳು ಎಂದರು.
ನಾನು ನನ್ನ ದೇಶವನ್ನು ಹೃದಯಾಂತರಾಳದಿಂದ ಪ್ರೀತಿಸುತ್ತೇನೆ. ರಾಷ್ಟ್ರವನ್ನು ನಿರ್ಮಿಸಿದ ನಿರ್ಭೀತ ನಂಬಿಕೆಯನ್ನು ನಾವು ಹಿಡಿದಿಟ್ಟುಕೊಳ್ಳುವ ಅಮೆರಿಕವನ್ನು ನೋಡುತ್ತೇನೆ. ಇದು ಇಡೀ ಜಗತ್ತಿಗೆ ಪ್ರೇರಣೆಯಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಕೈಗೆ ಎಟುಕದ್ದು ಯಾವುದೂ ಇಲ್ಲ ಎಂದರು.
Advertisement