ಕೀವ್ (ಉಕ್ರೇನ್): ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಬಾರಿ ರಷ್ಯಾ ರಾಜಧಾನಿ ಮಾಸ್ಕೋಗೆ ಭೇಟಿ ನೀಡಿದ ಸುಮಾರು ಒಂದೂವರೆ ತಿಂಗಳ ನಂತರ ಇಂದು ಶುಕ್ರವಾರ ಯುದ್ಧ ಪೀಡಿತ ಉಕ್ರೇನ್‌ಗೆ ತಮ್ಮ ಐತಿಹಾಸಿಕ ಭೇಟಿ ಕೈಗೊಂಡಿದ್ದಾರೆ.
1991 ರಲ್ಲಿ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ನಂತರ ಉಕ್ರೇನ್‌ಗೆ ಭಾರತೀಯ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ.
ಭಾರತೀಯ ಕಾಲಮಾನ ಇಂದು ಬೆಳಗ್ಗೆ ಉಕ್ರೇನ್ ರಾಜಧಾನಿ ಕೀವ್ ಗೆ ಬಂದಿಳಿದ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ, ಮಾತುಕತೆ ವೇಳೆ ಅವರು ರಷ್ಯಾ ಜೊತೆ ನಡೆಯುತ್ತಿರುವ ಸಂಘರ್ಷದ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಹೇಳಲಾಗುತ್ತಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಅಗತ್ಯವನ್ನು ಆಗಾಗ್ಗೆ ಒತ್ತಿಹೇಳುತ್ತಿರುವ ಮೋದಿಯವರು ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಿ ಎಂದು ಝೆಲೆನ್ಸ್ಕಿಯವರ ಜೊತೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ. ಸ್ನೇಹಿತ ಮತ್ತು ಪಾಲುದಾರ ದೇಶವಾಗಿ ಇಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಿ ಬರಬೇಕೆಂದು ಉಕ್ರೇನ್ ಗೆ ಪ್ರಯಾಣ ಬೆಳೆಸುವ ಮುನ್ನ ಹೇಳಿದ್ದರು.
ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಪಾಶ್ಚಿಮಾತ್ಯ ಜಗತ್ತು ರಷ್ಯಾದ ನಾಯಕನನ್ನು ಪ್ರತ್ಯೇಕಿಸಲು ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ ರಷ್ಯಾವನ್ನು ಮಿತ್ರರಾಷ್ಟ್ರ ಮತ್ತು ಪುಟಿನ್ ನಾಯಕತ್ವವನ್ನು ಮೋದಿಯವರು ಹೊಗಳಿದ್ದು ಎಲ್ಲರ ಗಮನಸೆಳೆದಿತ್ತು.
ಮೋದಿ ಅವರು ಝೆಲೆನ್ಸ್ಕಿಯವರನ್ನು ಭೇಟಿಯಾಗಲು ಸಜ್ಜಾಗಿರುವುದರಿಂದ, ಮೋದಿ ಅವರ ಮಾಸ್ಕೋ ಭೇಟಿಯ ನಂತರ ಕೈವ್ ಜೊತೆಗಿನ ಸಂಬಂಧವನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಎಲ್ಲರ ದೃಷ್ಟಿ ಹರಿದಿದೆ.
Advertisement