
ಢಾಕಾ: ಆಗಸ್ಟ್‌ನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿರ್ಗಮನದ ನಂತರ ಬಾಂಗ್ಲಾದೇಶವು ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು 88 ಕೋಮು ಹಿಂಸಾಚಾರದ ಪ್ರಕರಣಗಳನ್ನು ಅಲ್ಲಿನ ಹಂಗಾಮಿ ಸರ್ಕಾರ ದೃಢಪಡಿಸಿದೆ.
ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದು, ದಾಳಿಗೆ ಸಂಬಂಧಿಸಿದಂತೆ 70 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಹೇಳಿರುವುದನ್ನು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ 2-3 ದಿನಗಳ ಹಿಂದೆ ಬಾಂಗ್ಲಾಗೆ ಭೇಟಿ ನೀಡಿದ್ದು, ಬಾಂಗ್ಲಾದೇಶದ ನಾಯಕತ್ವದೊಂದಿಗಿನ ಸಭೆಗಳಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಭಾರತದ ಆತಂಕವನ್ನು ಮಿಶ್ರಿ ವ್ಯಕ್ತಪಡಿಸಿದ್ದರು, ದುರ್ಬಲ ಸಮುದಾಯಗಳ ವರ್ಧಿತ ರಕ್ಷಣೆಗಾಗಿ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಬಾಂಗ್ಲಾ ಹಂಗಾಮಿ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಒಪ್ಪಿಕೊಂಡಿದೆ.
ಭಾರತ ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಬಯಸುತ್ತದೆ, ರಚನಾತ್ಮಕ ಮತ್ತು ಜನಕೇಂದ್ರಿತ ಪಾಲುದಾರಿಕೆಯ ಬಯಕೆಯನ್ನು ಒತ್ತಿಹೇಳುತ್ತದೆ ಎಂದು ತಮ್ಮ ಭೇಟಿಯಲ್ಲಿ ಮಿಸ್ತ್ರಿ ಹೇಳಿದ್ದರು. ಈ ಗುರಿಗಳನ್ನು ಸಾಧಿಸಲು ಬಾಂಗ್ಲಾದೇಶದ ಪ್ರಸ್ತುತ ಮಧ್ಯಂತರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತದ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು.
ಆಗಸ್ಟ್ 5 ಮತ್ತು ಅಕ್ಟೋಬರ್ 22 ರ ನಡುವೆ 88 ಪ್ರಕರಣಗಳು ದಾಖಲಾಗಿವೆ ಎಂದು ಆಲಂ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈಶಾನ್ಯದಲ್ಲಿರುವ ಸುನಮ್‌ಗಂಜ್ ಮತ್ತು ಮಧ್ಯ ಬಾಂಗ್ಲಾದೇಶದ ಗಾಜಿಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಘಟನೆಗಳು ಸಂಭವಿಸಿವೆ ಎಂದು ವರದಿಯಾಗಿದೆ.
"ಸುನಮ್‌ಗಂಜ್, ಗಾಜಿಪುರ ಮತ್ತು ಇತರ ಪ್ರದೇಶಗಳಲ್ಲಿ ಹಿಂಸಾಚಾರದ ಹೊಸ ಘಟನೆಗಳು ವರದಿಯಾಗಿರುವುದರಿಂದ ಪ್ರಕರಣಗಳು ಮತ್ತು ಬಂಧನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ" ಎಂದು ಆಲಂ ಹೇಳಿದ್ದಾರೆ. ಕೆಲವು ಬಲಿಪಶುಗಳು ಶೇಖ್ ಹಸೀನಾ ಅವರ ಮಾಜಿ ಆಡಳಿತ ಪಕ್ಷವಾದ ಅವಾಮಿ ಲೀಗ್‌ನ ಸದಸ್ಯರು ಅಥವಾ ಅಂಗಸಂಸ್ಥೆಗಳವರಾಗಿದ್ದು, ರಾಜಕೀಯ ಸಂಬಂಧಗಳು ಅಥವಾ ವೈಯಕ್ತಿಕ ವಿವಾದಗಳಿಂದಾಗಿ ಗುರಿಯಾಗಿರಬಹುದು ಎಂದು ಆಲಂ ಹೇಳಿದ್ದಾರೆ.
“ಕೆಲವು ದಾಳಿಗಳು ಆಡಳಿತ ಪಕ್ಷದ ಮಾಜಿ ಸದಸ್ಯರಾಗಿದ್ದ ಅಥವಾ ವೈಯಕ್ತಿಕ ವಿವಾದಗಳ ಪರಿಣಾಮವಾಗಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿವೆ. ಆದರೂ ಹಿಂಸಾಚಾರ ನಡೆದಿರುವುದರಿಂದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ,'' ಎಂದು ಹೇಳಿದರು.
Advertisement