
ವಾಷಿಂಗ್ ಟನ್: ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 150 ವರ್ಷಗಳ ಹಿಂದಿನಿಂದಲೂ ಸಂವಿಧಾನ ಖಾತ್ರಿಪಡಿಸುತ್ತಿರುವ ಅಂಶವೊಂದನ್ನು ರದ್ದುಗೊಳಿಸಲು ಮುಂದಾಗಿದ್ದಾರೆ.
ಅಮೇರಿಕಾ ತನ್ನ ನೆಲದಲ್ಲಿ ಹುಟ್ಟಿದ ಯಾವುದೇ ಮಗುವಿಗೆ ಸ್ವಾಭಾವಿಕವಾಗಿ ಪೌರತ್ವ ನೀಡುತ್ತದೆ. ಇದನ್ನು ಜನ್ಮಸಿದ್ಧ ಹಕ್ಕು-ಪೌರತ್ವ ಎನ್ನಲಾಗುತ್ತದೆ. ಅಮೇರಿಕಾದಲ್ಲಿ ಜನಿಸಿದ ಮಗುವಿನ ತಂದೆ-ತಾಯಿಯರ ಪೌರತ್ವದ ಸ್ಥಿತಿ ಏನಾಗಿದ್ದರೂ ಅದನ್ನು ಪರಿಗಣಿಸದೇ ಮಗುವಿಗೆ ಅಮೇರಿಕಾದ ಪೌರತ್ವ ನೀಡುವುದನ್ನು ಸಂವಿಧಾನ 150 ವರ್ಷಗಳಿಂದಲೂ ಖಾತ್ರಿಪಡಿಸುತ್ತಿದೆ.
ಜನ್ಮಸಿದ್ಧ ಹಕ್ಕು-ಪೌರತ್ವವನ್ನು ಹಾಸ್ಯಾಸ್ಪದ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಅದನ್ನು ಬದಲಾಯಿಸುತ್ತೇವೆ. ಇದಕ್ಕಾಗಿ ನಾವು ಜನರೆಡೆಗೆ ಹೋಗಬೇಕಾಗಬಹುದು ಆದರೆ ಈ ಜನ್ಮಸಿದ್ಧ ಹಕ್ಕು ಪೌರತ್ವವನ್ನು ಕೊನೆಗಾಣಿಸುತ್ತೇವೆ ಎಂದು ಹೇಳಿದ್ದಾರೆ.
ಇಂಥಹದ್ದೇ ಮಾತುಗಳನ್ನು ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ ಆಡಿದ್ದರು ಆದರೆ ಮಹತ್ವದ್ದೇನೂ ಘಟಿಸಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
"ಇದು ಪ್ರತಿ ದೇಶದ ಅಭ್ಯಾಸವಲ್ಲ ಎಂದು ಹೇಳಿರುವ ಟ್ರಂಪ್ ಮತ್ತು ಅವರ ಬೆಂಬಲಿಗರು ಅಮೇರಿಕಾದಲ್ಲಿರುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಅಮೆರಿಕನ್ ಪ್ರಜೆಯಾಗಲು ಕಠಿಣ ಮಾನದಂಡಗಳಿರಬೇಕು ಎಂದು ವಾದಿಸಿದ್ದಾರೆ" ಎಂದು ಸರ್ಕಲ್ ಆಫ್ ಕೌನ್ಸೆಲ್‌ನ ಪಾಲುದಾರ ರಸೆಲ್ ಎ ಸ್ಟಾಮೆಟ್ಸ್ ಬಿಸಿನೆಸ್ ಸ್ಟ್ಯಾಂಡರ್ಡ್‌ಗೆ ತಿಳಿಸಿದರು.
ಜನ್ಮಸಿದ್ಧ ಪೌರತ್ವದ ಹಕ್ಕು ಸಂವಿಧಾನದ 14 ನೇ ತಿದ್ದುಪಡಿಯನ್ನು ಆಧರಿಸಿದೆ ಮತ್ತು US ಕಾನೂನಿನ ಅಡಿಯಲ್ಲಿ ಉತ್ತಮವಾಗಿ ಸ್ಥಾಪಿತವಾಗಿದೆ, ಆದ್ದರಿಂದ ಅದನ್ನು ಬದಲಾವಣೆ ಮಾಡಲು ಮುಂದಾದರೆ ಅದರಿಂದ ಗಮನಾರ್ಹ ಕಾನೂನು ಸವಾಲುಗಳು ಎದುರಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೇರಿಕನ್ ಇಮಿಗ್ರೇಷನ್ ಕೌನ್ಸಿಲ್ ಹೇಳುವಂತೆ ಜನ್ಮಸಿದ್ಧ ಪೌರತ್ವವನ್ನು ತೆಗೆದುಹಾಕುವುದು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಮೇರಿಕನ್ ಪೋಷಕರಿಗೆ ತಮ್ಮ ಮಕ್ಕಳ ಪೌರತ್ವವನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ. ನಮ್ಮ ಜನ್ಮ ಪ್ರಮಾಣಪತ್ರಗಳು ನಮ್ಮ ಪೌರತ್ವದ ಪುರಾವೆಗಳಾಗಿವೆ. ಜನ್ಮ ಹಕ್ಕು ಪೌರತ್ವವನ್ನು ತೆಗೆದುಹಾಕಿದರೆ, US ನಾಗರಿಕರು ಇನ್ನು ಮುಂದೆ ತಮ್ಮ ಜನ್ಮ ಪ್ರಮಾಣಪತ್ರಗಳನ್ನು ಪೌರತ್ವದ ಪುರಾವೆಯಾಗಿ ಬಳಸಲಾಗುವುದಿಲ್ಲ" ಎಂದು ವಲಸೆ ವಿಭಾಗದ ಫ್ಯಾಕ್ಟ್ ಶೀಟ್ ಹೇಳುತ್ತದೆ.
2022 ರ US ಜನಗಣತಿಯ ಪ್ಯೂ ರಿಸರ್ಚ್‌ನ ವಿಶ್ಲೇಷಣೆಯ ಪ್ರಕಾರ, ಸುಮಾರು 4.8 ಮಿಲಿಯನ್ ಭಾರತೀಯ-ಅಮೆರಿಕನ್ನರು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ, ಅದರಲ್ಲಿ 34 ಪ್ರತಿಶತ ಅಥವಾ 1.6 ಮಿಲಿಯನ್ ಜನರು ಅಮೇರಿಕಾ ದೇಶದಲ್ಲೇ ಜನಿಸುವ ಮೂಲಕ ಪೌರತ್ವ ಪಡೆದಿದ್ದಾರೆ. ಈ ವ್ಯಕ್ತಿಗಳು ಪ್ರಸ್ತುತ ಕಾನೂನಿನ ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ನ ನಾಗರಿಕರಾಗಿದ್ದಾರೆ. ಟ್ರಂಪ್ ಈ ಕಾನೂನನ್ನು ರದ್ದುಗೊಳಿಸಿದರೆ, 1.6 ಮಿಲಿಯನ್ ಭಾರತೀಯರ ಪರಿಣಾಮ ಉಂಟಾಗಲಿದೆ.
ಆದಾಗ್ಯೂ, ಅಧ್ಯಕ್ಷರು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಮತ್ತು ಹಕ್ಕನ್ನು ನಿರ್ಬಂಧಿಸುವ ಕಾರ್ಯಕಾರಿ ಪ್ರಯತ್ನವು 14 ನೇ ತಿದ್ದುಪಡಿಯ ಉಲ್ಲಂಘನೆಯಾಗಿದೆ. "ನಾನು ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಸುಮಾರು ಒಂದು ದಶಕದಿಂದ ಈ ರೀತಿಯ ವಿಷಯಗಳನ್ನು ಹೇಳುತ್ತಿದ್ದಾರೆ" ಎಂದು ವಲಸೆ ಪರ ಕ್ಯಾಟೊ ಸಂಸ್ಥೆಯ ಉಪಾಧ್ಯಕ್ಷ ಅಲೆಕ್ಸ್ ನೌರಾಸ್ಟೆಹ್ ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ.
Advertisement